ಮಂಗಳೂರು: ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಶಿಲುಬೆ ಹಾನಿಗೈದು ದುಷ್ಕೃತ್ಯ ನಡೆಸಿರುವ ಘಟನೆ ದ.ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ನಡೆದಿದೆ.
ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಹೆಸರಿನ ಕ್ರೈಸ್ತ ಪ್ರಾರ್ಥನಾ ಮಂದಿರವಾಗಿದ್ದು, ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿ ಶಿಲುಬೆಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಬಳಿಕ ಭಗವಾಧ್ವಜ ಹಾರಿಸಿ ಹನುಮಂತನ ಫೋಟೋ ಇಟ್ಟು ದುಷ್ಕೃತ್ಯ ಮೆರೆದಿದ್ದಾರೆ. ಅಲ್ಲದೇ ಪ್ರಾರ್ಥನಾ ಮಂದಿರದ ದಾಖಲೆಗಳನ್ನು ಸಂಗ್ರಹಣೆ ಮಾಡಿಟ್ಟಿದ್ದ ಗೋಡ್ರೇಜ್ಗೂ ಹಾನಿ ಮಾಡಲಾಗಿದೆ.
ಘಟನೆ ಸಂಬಂಧ ಪ್ರಾರ್ಥನಾ ಮಂದಿರದ ಪಾದ್ರಿ ಫಾ| ಜೋಸ್ ವರ್ಗಿಸ್ರಿಂದ ಎಂಬುವರು 30 ವರ್ಷಗಳಿಂದ ಕಟ್ಟಡದ ತೆರಿಗೆ ಕಟ್ಟುತ್ತಿದ್ದು, ಪ್ರಾರ್ಥನಾ ಮಂದಿರ ಅಧಿಕೃತ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇನ್ನು ಪ್ರಾರ್ಥನಾ ಮಂದಿರದ ಜಾಗ ಖಾಸಗಿ ವ್ಯಕ್ತಿಗೆ ಸೇರಿದೆ, ತಕ್ಷಣ ಪ್ರಾರ್ಥನಾ ಮಂದಿರ ತೆರವುಗೊಳಿಸಬೇಕು ಅಂತ ಹಿಂದೂಪರಸಂಘಟನೆಗಳ ಪ್ರಮುಖರು ಒತ್ತಾಯ ಮಾಡಿದ್ದಾರೆ, ಒಂದು ವೇಳೆ ಜಿಲ್ಲಾಡಳಿತ ಪ್ರಾರ್ಥನಾ ಮಂದಿರ ತೆರವುಗೊಳಿಸದೇ ಇದ್ದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.