ಬೆಳಗಾವಿ: ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ ಸಿಎಂ ಮಾಡ್ತೀವಿ ಅಂದಿದ್ರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಪಕ್ಷದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಜಿಲ್ಲೆಯ ರಾಮದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಅಲ್ಲಿ-ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ. ದೆಹಲಿಗೆ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ ಮತ್ತು ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಿಸುತ್ತೀವಿ ಅಂತ ಸುಳ್ಳು ಹೇಳ್ತಾರೆ. ಅಂಥವರ ಮಾತನ್ನು ನಂಬಲೇಬೇಡಿ ಅಂತ ದೆಹಲಿಗೆ ಹೋಗಿ ಬಂದ ಮಂದಿ ಹೇಳುತ್ತಿದ್ದಾರೆ ಎಂದರು.
ಅಷ್ಟೇಅಲ್ಲದೇ, ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ರೆಡಿ ಮಾಡಿಕೊಳ್ಳಿ ಅಂದ್ರು ಅದಕ್ಕೆ ನಾನು ಹೇಳಿದೆ; ಮಕ್ಕಳಾ..! 2,500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ(?) ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು(?) ಯಾವ ಕೋಣೆಯಲ್ಲಿ ಇಡೋದೋ ಅಥವಾ ಗೋದಾಮಿನಲ್ಲಿ ಇಡೋದೋ(?) ಅದೇ ರೀತಿ ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡ್ತಾರೆ ಎಂದು ಹೇಳಿದರು.
ಇನ್ನು ನಾನು ಅಟಲ್ ಬಿಹಾರಿ ವಾಜಪೇಯಿ ಅವರೊಟ್ಟಿಗೆ ಕೆಲಸ ಮಾಡಿದವನು. ಎಲ್.ಕೆ ಅಡ್ವಾಣಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಅವರು ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರಿತಿದ್ದರು. ಹೀಗಿರುವಾಗ ನಮ್ಮಂತಹ ವ್ಯಕ್ತಿಗೆ ಹೇಳ್ತಾರೆ ಎರಡೂಸಾವಿರ ಕೋಟಿ ರೆಡಿ ಮಾಡಿಕೊಳ್ಳಿ ಸಿಎಂ ಮಾಡ್ತೀವಿ ಅಂತಾರೆ ಎಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಿಂಗಾಯಿತರಲ್ಲಿ 72 ಪರ್ಸೆಂಟ್ ಪಂಚಮಸಾಲಿ ಸಮಾಜದವರು. ಅದರಲ್ಲಿ ಇಲ್ಲಿಯ ವರೆಗೂ ರಾಜ್ಯದಲ್ಲಿ ಸಿಎಂ ಆದವರು ಎರಡು ಪರ್ಸೆಂಟ್ನವರು. ನಾವು ನೇರವಾಗಿ ಮಾತನಾಡಿದ್ರೆ ಸತ್ಯ ಹೇಳಿದ್ರೆ ರಾಜಕಾರಣದಲ್ಲಿ ನಡೆಯಲ್ಲ. ಸುಳ್ಳು ಹೇಳೋದು ಮೋಸ ಮಾಡೋದು ರಾಜಕಾರಣ ಎಂದು ಪ್ರಸ್ತುತ ರಾಜಕೀಯದ ಬಗ್ಗೆ ಟೀಕಿಸಿದರು.
ಸದ್ಯ ನಾನು ನಾಟಕ ಮಾಡೋದಾಗಿದ್ರೆ ಬಿಎಸ್ವೈನವರನ್ನೇ ಕೆಳಗಿಳಿಸಿದಾಗಲೇ ಸಿಎಂ ಆಗುತ್ತಿದ್ದೆ. ಪಾಪ ಯಡಿಯೂರಪ್ಪರಿಗೂ ಇತ್ತೀಚೆಗೆ ಪುತ್ರ ವ್ಯಾಮೋಹ ಬಂದಬಿಟ್ಟಿತ್ತು. ಯತ್ನಾಳ್ನ ಮಂತ್ರಿ ಮಾಡಿದ್ರೆ ನನ್ನ ಧೀಮಂತ ಮಗ ಬಿ.ವೈ ವಿಜಯೇಂದ್ರ ಅವರ ಗತಿ ಏನು(?) ಅದಕ್ಕೆ ನನ್ನ ಮಂತ್ರಿ ಮಾಡದೇ ತುಳಿದರು. ನಾನೇ ಲೆಟರ್ ಕೊಟ್ಟರೂ ಸಹ ಸೈಡ್ಗೆ ಇಡುತ್ತಿದ್ದರು ಅದಕ್ಕೆ ಬಿಎಸ್‌ವೈಗೆ ಹೇಳಿದ್ದೆ ಸಿಎಂ ಸ್ಥಾನದಿಂದ ಇಳಿಸಿಯೇ ಈ ಛೇಂಬರ್‌ಗೆ ಬರ್ತೀನಿ ಎಂದಿದ್ದೆ ನಾನು ಕಾವೇರಿ, ಕೃಷ್ಣಾ ನಿವಾಸಕ್ಕೆ ಬರಲ್ಲ ಎಂದಿದ್ದೆ ಹಾಗೂ ನಿನ್ನ ಸಿಎಂ ಸ್ಥಾನದಿಂದ ಇಳಿಸಿಯೇ ಈ ಛೇಂಬರ್‌ಗೆ ಬರ್ತೀನಿ ಎಂದಿದ್ದೆ ಎಂದು ಸಿಎಂ ಬಿಎಸ್ವೈ ಅವರಿಗೆ ಸವಾಲ್ ಹಾಕಿದ್ದ ವಿಚಾರವನ್ನು ಹಂಚಿಕೊಂಡು ಕಿಡಿಕಾರಿದರು.
ಮೊನ್ನೆ ಸಿಎಂ ಮನೆಗೆ ಹೋಗಿದ್ದೆ ಆಗ ಅವರು ಹೇಳಿದರು ನಿಮ್ಮಿಂದ ನಾನು ಸಿಎಂ ಆದೆ ಅಂತ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು. ನಾನು ಹೇಳ್ದೆ ಮಂತ್ರಿ ಆಗೋ ಆಸೆ ನನಗೆ ಇಲ್ಲ. ನೀರಾವರಿ ಯೋಜನೆ 10 ಸಾವಿರ ಕೋಟಿ ಕೊಡಿ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿ ನಿಮ್ಮ ಮಂತ್ರಿ ಪಟ್ಟ ಅಲ್ಲೇ ಇರಲಿ ಅಂದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿದ್ದಾರೆ.