Monday, December 23, 2024

‘ತ್ರಿಶಂಕು ಮಣಿ’ಗಾಗಿ ನಾನಾವತಾರಗಳು: ಪವರ್ ಟಿವಿ ರೇಟಿಂಗ್ 4/5

ಕೆಜಿಎಫ್ ನಂತರ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ವಿಚಾರದಲ್ಲಿ ನಮ್ಮ ಸ್ಯಾಂಡಲ್​ವುಡ್ ಮೇಕರ್ಸ್​ ಸಖತ್ ಬದಲಾಗಿದ್ದಾರೆ. ಡಿಫರೆಂಟ್​ಗೆ ಕೇರ್ ಆಫ್ ಅಡ್ರೆಸ್ ಆಗಿ ಬದಲಾಗ್ತಿರೋ ಕನ್ನಡ ಇಂಡಸ್ಟ್ರಿಯಿಂದ ಮತ್ತೊಂದು ಹೊಸ ಎಕ್ಸ್​ಪೆರಿಮೆಂಟಲ್ ಸಿನಿಮಾ ತೆರೆಗಪ್ಪಳಿಸಿದೆ.

  • ಅವತಾರ ಪುರುಷ ಪ್ರಯೋಗಕ್ಕೆ ಏನಂದ ಪ್ರೇಕ್ಷಕ ಪ್ರಭು..?
  • ಕೆಜಿಎಫ್​ ರೀತಿ ಎರಡು ಭಾಗಗಳಲ್ಲಿ ಅವತಾರ ಪುರುಷ ತೆರೆಗೆ
  • ತ್ರಿಶಂಕು ಮಣಿಗಾಗಿ ಅವತಾರ ಪುರುಷನ ನಾನಾವತಾರ
  • ಬಹುದೊಡ್ಡ ತಾರಾಗಣದ ಅತ್ಯದ್ಭುತ ಮೇಕಿಂಗ್ ಕಹಾನಿ

ದಿ ವೆಯ್ಟ್ ಈಸ್ ಓವರ್. ಕೆಜಿಎಫ್ ರೀತಿ ಎರಡು ಭಾಗಗಳಲ್ಲಿ ತಯಾರಾಗಿರೋ ಅವತಾರ ಪುರುಷ ಚಿತ್ರದ ಮೊದಲ ಭಾಗ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಟೀಸರ್, ಸಾಂಗ್ಸ್, ಮೇಕಿಂಗ್ ಹಾಗೂ ಟ್ರೈಲರ್​ನಿಂದ ಭರವಸೆ ಮೂಡಿಸಿದ್ದ ಅವತಾರ ಪುರುಷ, ಸ್ಯಾಂಪಲ್ಸ್​​ಗಿಂತ ಕೊಂಚ ಜಾಸ್ತಿನೇ ಕಿಕ್ ಕೊಡುತ್ತಿದೆ.

ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಅಂದಾಗ ಅಲ್ಲಿ ತರ್ಲೆ, ತುಂಟತನ, ತಮಾಷೆಗಳು ಕಟ್ಟಿಟ್ಟ ಬುತ್ತಿ. ಇದು ಸುನಿ ಫಿಲ್ಮ್ ಮೇಕಿಂಗ್​ನ ಕಾಮನ್ ಫ್ಯಾಕ್ಟರ್ಸ್​. ಆದರೆ, ಅವರು ಇದೇ ಮೊದಲ ಬಾರಿ ಬೇರೆಯದ್ದೇ ಜಾನರ್​ಗೆ ಕೈಹಾಕಿ ಭೇಷ್ ಅನಿಸಿಕೊಂಡಿದ್ದಾರೆ. ಮಾಟ, ಮಂತ್ರ, ವಾಮಾಚಾರ, ತ್ರಿಶಂಕು ಮಣಿ ಹೀಗಂತ ಬ್ಲ್ಯಾಕ್ ಮ್ಯಾಜಿಕ್​ ಮೇಲೆ ಕಥೆ ಮಾಡಿ, ಅದನ್ನ ಹಾಸ್ಯದ ಜೊತೆ ಜೊತೆಗೇ ಹೇಳೋ ಪ್ರಯತ್ನ ಮಾಡಿದ್ದಾರೆ.

ಜೂನಿಯರ್ ಆರ್ಟಿಸ್ಟ್ ಅನಿಲ್ ಆಗಿ ಶರಣ್ ಅಕ್ಷರಶಃ ಅವತಾರ ಪುರುಷನಾಗಿ ಕಮಾಲ್ ಮಾಡಿದ್ದಾರೆ. ರಾಮ ಜೋಯಿಸ್ ಪಾತ್ರದಾರಿ ಡೈಲಾಗ್​ ಕಿಂಗ್​ ಸಾಯಿಕುಮಾರ್, ಸುಶೀಲಾ ಪಾತ್ರದಾರಿ ಭವ್ಯ ಅವರು ಮಗ ಚಿಕ್ಕವಯಸ್ಸಿನಲ್ಲೇ ಕಳೆದು ಹೋಗ್ತಾನೆ. ಮಗನ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಅನಿಲನ ರೂಪದಲ್ಲಿ ರಾಮ ಜೋಯಿಸರ ಸಹೋದರಿಯ ಪುತ್ರಿ ಸಿರಿ ಶರಣ್​ರನ್ನ ಮಗನಾಗಿ ಕರೆತರುತ್ತಾಳೆ.
ರಾಮ ಜೋಯಿಸರ ಮನೆಯಲ್ಲಿದ್ದ ತ್ರಿಶಂಕು ಮಣಿಗಾಗಿ ಅಲ್ಲೊಂದು ದೊಡ್ಡ ವಾಮಾಚಾರದ ಪಡೆಯೇ ಸಿದ್ಧವಾಗಿರುತ್ತೆ. ಅದನ್ನ ತಪ್ಪಿಸೋಕೆ ಅವತಾರ ಪುರುಷ ಏನೆಲ್ಲಾ ಮಾಡ್ತಾನೆ..? ಆ ತ್ರಿಶಂಕು ಮಣಿ – ರಾಮ ಜೋಯಿಸರ ಮನೆಗೂ ಏನು ಸಂಬಂಧ ಅನ್ನೋದೇ ಚಿತ್ರದ ಅಸಲಿ ಕಥೆ.

ಅವತಾರ ಪುರುಷ ಆರ್ಟಿಸ್ಟ್ ಪರ್ಫಾಮೆನ್ಸ್..?

ಅನಿಲನ ಪಾತ್ರದಲ್ಲಿ ಶರಣ್ ಜೂನಿಯರ್ ಆರ್ಟಿಸ್ಟ್ ಆಗಿ, ಅವ್ರ ಕಾಮಿಡಿ ಟೈಂ, ಪಂಚ್ ಡೈಲಾಗ್ಸ್ ಮಜಭೂತಾಗಿವೆ. ಕ್ಲೈಮ್ಯಾಕ್ಸ್​​ನಲ್ಲಿ ಶರಣ್​ರ ಹೊಸ ಅವತಾರ ನೋಡುಗರಿಗೆ ಥ್ರಿಲ್ ಕೊಡಲಿದೆ. ಶರಣ್ ಡ್ಯಾನ್ಸ್ ಕೂಡ ಸಖತ್ ಸರ್​ಪ್ರೈಸಿಂಗ್ ಆಗಿದ್ದು, ಸ್ಯಾಂಡಲ್​ವುಡ್ ಅಧ್ಯಕ್ಷನ ಕರಿಯರ್​ಗೆ ಇದು ಮಹತ್ವದ ಸಿನಿಮಾ ಆಗಲಿದೆ.

ಅತ್ತೆ ಮಗಳು ಸಿರಿ ಪಾತ್ರದಲ್ಲಿ ನಾಯಕಿ ಆಶಿಕಾ ಗ್ಲಾಮರ್ ಮಸ್ತ್ ಎನಿಸಲಿದೆ. ರಾಮ ಜೋಯಿಸರ ಪಾತ್ರಕ್ಕೆ ಸಾಯಿಕುಮಾರ್​ರಿಂದ ಮತ್ತಷ್ಟು ತೂಕ ಹೆಚ್ಚಿದೆ. ಮಗನಿಗಾಗಿ ಮಿಡಿಯೋ ತಾಯಿಯಾಗಿ ಭವ್ಯ ಅಭಿನಯ ಅದ್ಭುತ. ಸಾಧು ಕೋಕಿಲಾ ಹಾಗೂ ವಿಜಯ್ ಚೆಂಡೂರು ಕಾಮಿಡಿ ಟ್ರ್ಯಾಕ್ ನೋಡುಗರನ್ನ ನಕ್ಕು ನಲಿಸುತ್ತೆ.

ಬಿ. ಸುರೇಶ್, ಬಾಲಾಜಿ ಮನೋಹರ್, ಅಶುತೋಷ್ ರಾಣಾ ಪಾತ್ರಗಳು ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿವೆ. ಇವೆಲ್ಲದರ ಜೊತೆಗೆ ಕ್ಲೈಮ್ಯಾಕ್ಸ್​​ನಲ್ಲಿ ಬರೋ ಶ್ರೀನಗರ ಕಿಟ್ಟಿ ಪಾತ್ರ ಕಥೆಗೆ ಬಿಗ್ ಟ್ವಿಸ್ಟ್ ಕೊಡಲಿದೆ. ಎರಡನೇ ಭಾಗಕ್ಕೆ ಕುತೂಹಲ ಹೆಚ್ಚಿಸಲಿದೆ.

ಅವತಾರ ಪುರುಷ ಪ್ಲಸ್ ಪಾಯಿಂಟ್ಸ್: 

ಶರಣ್ ನಟನೆ
ಸಿಂಪಲ್ ಸುನಿಯ ಕಥೆ, ನಿರೂಪಣೆ
ಅರ್ಜುನ್ ಜನ್ಯಾ ಸಂಗೀತ, ಹಿನ್ನೆಲೆ ಸಂಗೀತ
ಆಶಿಕಾ ಗ್ಲಾಮರ್
ಸಾಯಿಕುಮಾರ್ ಗಾಂಭೀರ್ಯ
ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ
ತ್ರಿಶಂಕು ಸ್ವರ್ಗದ ಪರಿಕಲ್ಪನೆ
ಕಾಮಿಡಿ ಡೈಲಾಗ್ಸ್, ದೃಶ್ಯಗಳು
ಕ್ಲೈಮ್ಯಾಕ್ಸ್​​ನಲ್ಲಿ ಚಾಪ್ಟರ್- 2ಗೆ ಲೀಡ್
ಅವತಾರ ಪುರುಷನಿಗೆ ಪವರ್ ಟಿವಿ ರೇಟಿಂಗ್: 4/5

ಅವತಾರ ಪುರುಷ ಫೈನಲ್ ಸ್ಟೇಟ್​ಮೆಂಟ್:

ಪ್ರಶಾಂತ್ ನೀಲ್, ಯಶ್ ಹಾಗೂ ವಿಜಯ್ ಕಿರಗಂದೂರು ರೀತಿ ಮೂರು ಕೈಗಳು ಸೇರಿದ್ರೆ ಮಾತ್ರ ಕೆಜಿಎಫ್ ನಂತಹ ಒಳ್ಳೆಯ ಔಟ್​ಪುಟ್ ಬರೋಕೆ ಸಾಧ್ಯ. ಇದೀಗ ಅವತಾರ ಪುರುಷ ಸಿನಿಮಾದ ಹಿಂದೆ ಕೂಡ ಸುನಿ, ಶರಣ್ ಜೊತೆ ಅವ್ರ ಕನಸುಗಳಿಗೆ ರೆಕ್ಕೆ ಕಟ್ಟಿದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವ್ರ ಸಿನಿಮೋತ್ಸಾಹ ಬಹಳಷ್ಟಿದೆ. ಕೊರೋನಾದಿಂದ ಸಿನಿಮಾ ರಿಲೀಸ್ ತಡವಾದ್ರೂ, ಮೇಕಿಂಗ್ ದಿನಗಳು ಹೆಚ್ಚಾದರೂ, ತಂಡ ಫೈನಾನ್ಸ್​ಗೆ ಬೆಟ್ಟದಷ್ಟು ಬಡ್ಡಿ ಬೆಳೆಯುತ್ತಿದ್ರೂ ಒಳ್ಳೆಯ ಸಿನಿಮಾನ ಪ್ರೇಕ್ಷಕರಿಗೆ ಉಣಬಡಿಸೋಕೆ ಅವ್ರು ಮಾಡಿದ ತಪಸ್ಸು ಅಷ್ಟಿಷ್ಟಲ್ಲ.

ವಾಮಾಚಾರದ ಸಿನಿಮಾ ಅಂದ್ರೆ ಮಕ್ಕಳು ಹೆದರುತ್ತಾರೇನೋ ಅಂತ ಭಯ ಪಡೋ ಅವಶ್ಯಕತೆಯಿಲ್ಲ. ಕಾರಣ ಹಾಸ್ಯದ ಜೊತೆ ಜೊತೆಗೆ ಒಂದು ಸೀರಿಯಸ್ ವಿಚಾರವನ್ನ ಕಟ್ಟಿಕೊಡಲಾಗಿದೆ. ಹಾಗಾಗಿ ಮಕ್ಕಳಿಂದ ಮುದುಕರವರೆಗೆ ಎಲ್ಲಾ ವಯೋಮಾನದ ಮಂದಿ ಸಕುಟುಂಬ ಸಮೇತ ನೋಡಬಹುದಾದ ಸಿನಿಮಾ ಇದು. ಪಕ್ಕಾ ಮನರಂಜನೆ ಜೊತೆ ಕೊಡೋ ಕಾಸಿಗೆ ಮೋಸ ಇಲ್ಲ ಗುರು ಅನ್ನೋ ಫೀಲ್ ಕೊಡಲಿದೆ. ಮೇಕಿಂಗ್ ಗತ್ತು, ಪಾತ್ರಗಳ ಗಮ್ಮತ್ತು ಥಿಯೇಟರ್​ನಿಂದ ಹೊರಬಂದ್ರೂ ಸೂಪರ್ ಅನಿಸುತ್ತೆ. ಇದು ಸಿನಿಮಾ ವಿಷನ್ ಮತ್ತು ಪ್ಯಾಷನ್ ಇರೋ ಮನಸ್ಸುಗಳ ಕನಸಾಗಿದ್ದು, ಅದನ್ನ ಗೆಲ್ಲಿಸೋದು ಸಿನಿಪ್ರಿಯರಿಗೆ ಬಿಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES