ಚಿಕ್ಕಬಳ್ಳಾಪುರ: ಸಿಎಂ ಬಸವರಾಜ್ ಬೊಮ್ಮಾಯಿಗೆ ಅಧಿಕಾರ ಶಾಶ್ವತವಲ್ಲ ಆದರೆ ನಿಮ್ಮಪ್ಪ ಎಸ್.ಆರ್. ಬೊಮ್ಮಾಯಿ ಅವರು ರಾಜಕೀಯ ವಿಚಾರಕ್ಕೆ ಬಂದರೆ ಒಳ್ಳೆಯ ಹೆಸರು ತಗೊಂಡಿದ್ದರು ನೀವು ಅವರ ಹಾಗೇ ಒಳ್ಳೆ ಕೆಲಸ ಮಾಡಿ, ಎಂದು ಮುಖ್ಯಮಂತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಿವಿಮಾತು ಹೇಳಿದರು.
ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ನೀಡುವ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಮುಗಲಭೆ ವಿಚಾರದಲ್ಲಿ ಹುಡುಗರು ದಾರಿ ತಪ್ಪಬಾರದು. ಪೊಲೀಸರು ತಪ್ಪಿತಸ್ಥರನ್ನ ಬಿಡಬಾರದು, ಅಮಾಯಕರಿಗೆ ಶಿಕ್ಷೆ ಕೊಡಬಾರದು ಎಂದರು.
ಇನ್ನು ಬಿಜೆಪಿ ಬಳಿ ಬಂಡವಾಳವಿಲ್ಲ. ಮೊದಲು ಮೊಟ್ಟೆ, ಆಮೇಲೆ ಬಟ್ಟೆ, ಕೊನೆಗೆ ಹೊಟ್ಟೆ ಅಂತ ತೆಗೆದು ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಒಂದೊಂದು ವಿಷಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಚುನಾವಣೆ ಹತ್ತಿರ ಬಂದಾಗ ರಾಜಕೀಯ ಪಕ್ಷಗಳು ಈ ರೀತಿ ಸಂಘರ್ಷ ಸೃಷ್ಟಿಸುತ್ತಾರೆ ಆದ್ದರಿಂದ ಜನ ಎಚ್ಚರದಿಂದ ಇರಬೇಕೆಂದು ಮನವಿ ಮಾಡಿಕೊಂಡರು.
ಅದುವಲ್ಲದೇ ಭ್ರಷ್ಟಾಚಾರ ಪ್ರಕರಣದಲ್ಲಿ ಈಶ್ಚರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸತ್ತ ಸಂತೋಷ್ಗೆ ಪರಿಹಾರ ನೀಡಿ, ರೌಡಿಗೆ 25 ಲಕ್ಷ ಪರಿಹಾರ ಕೊಡ್ತೀರಾ.. ಇವರಿಗೆ ಕೊಡೋಕೆ ಏನು..? ಮೃತ ಸಂತೋಷ್ ಪ್ರಕರಣದಲ್ಲಿ ಹೊರ ರಾಜ್ಯದ ಪೊಲೀಸರು ಅಥವಾ ಸಿಬಿಐನಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಈ ಹಿಂದೆ ಪರಿಷತ್ತಿನಲ್ಲಿ 40% ಕಮಿಷನ್ ದಂಧೆಯನ್ನ ಪ್ರಸ್ತಾಪಿಸಿದ್ದೆ. ಆಗಲೇ ಭ್ರಷ್ಟಾಚಾರಕ್ಕೆ ತಡೆ ಹಾಕಿದರೆ ಅಮಾಯಕನ ಜೀವ ಹೋಗ್ತಿರಲಿಲ್ಲ. ಇನ್ನಾದರೂ ಸಿಎಂ ಸರ್ವ ಪಕ್ಷದ ಸಭೆ ಕರೆದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಕರ್ನಾಟಕದಲ್ಲಿ ಧಾರ್ಮಿಕ ವಿಚಾರ ನಡೆಯೋಲ್ಲ. ಜಾತಿ ರಾಜಕಾರಣ ನಡೆಯುತ್ತದೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.