ಗದಗ : ದಿಂಗಾಲೇಶ್ವರ ಸ್ವಾಮೀಜಿಗಳ 30 % ಆರೋಪಕ್ಕೆ ವಿರೋಧ ಪಕ್ಷದ ಶಾಸಕ ಹೆಚ್ ಕೆ ಪಾಟೀಲ ಗದಗನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳು ಸಹ ಹೇಳಿದ್ದವು. ವಿಧಾನ ಸಭೆ, ಪರಿಷತ್ನಲ್ಲಿ ಅವರ ಪಕ್ಷದ ಸದಸ್ಯರೇ ಆ ಭಾವ ಬರುವ ಹಾಗೆ ಮಾತಾಡಿದ್ದರು. ಪ್ರಧಾನ ಮಂತ್ರಿಯವರಿಗೆ, ನಡ್ಡಾ ಅವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಇವೆಲ್ಲದರ ನಂತರ ಸ್ವಾಮಿಗಳೇ ಆರೀತಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಂದ್ರೆ ಎಷ್ಟು ಬಹಿರಂಗವಾಗಿ ಬಿಜೆಪಿಯವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಬಹಿರಂಗವಾಗಿ ಭ್ರಷ್ಟಾಚಾರ ವಿಚಾರದಲ್ಲಿ ಅವರ ಕಾರ್ಯಕರ್ತನನ್ನೇ ಬಲಿ ಪಡೆದಿದೆ. ಏನಾದರೂ ಸಾಬೀತು ಮಾಡುವುದು ಉಳಿದಿದೆಯಾ..? ಬಿಜೆಪಿ ಸರ್ಕಾರ ರಾಜೀನಾಮೆ ಕೊಡಬೇಕು. ಈಶ್ವರಪ್ಪ ಒಬ್ಬರ ರಾಜೀನಾಮೆ, ಬಂಧಿಸುವುದಲ್ಲ, ಅವರ ಇಡೀ ಸರ್ಕಾರವೇ ರಾಜೀನಾಮೆ ಕೊಡಬೇಕು. ಇಷ್ಟೆಲ್ಲ ನಡೆದರೂ ಸರ್ಕಾರದಲ್ಲಿ ಕೂತಿದ್ದಾರೆ ಅಂದ್ರೆ ನಾಚಿಕೆಯಾಗ್ಬೇಕು. ಅವರು ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಮಠದ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಇವರಲ್ಲಿದೆ, ಇವರನ್ನ ದೇವರೇ ಕಾಪಾಡಬೇಕು ಎಂದು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.