ಬೆಳಗಾವಿ : ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವ ಮತ್ತು ಜಲಸಂರಕ್ಷಣೆ ನಿಟ್ಟಿನಲ್ಲಿ ಜಾತ್ಯಾತೀತ ಜನತಾದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆಗೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಬಳಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ವಿಧ್ಯುಕ್ತ ಚಾಲನೆ ನೀಡುವ ಮೂಲಕ ರಾಜ್ಯಾದ್ಯಂತ ನಡೆಯಲಿರುವ ಜಲಧಾರೆ ಯಾತ್ರೆಗೆ ಗ್ರೀನ್ ಸಿಗ್ನಲ್ ನೀಡಿದರು.
ಈ ಯಾತ್ರೆ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೂ ಜೆಡಿಎಸ್ ಸಿದ್ಧತೆ ಆರಂಭಿಸಿದೆ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಿತ್ತು. ಇದಕ್ಕೆ ಪರ್ಯಾಯವಾಗಿ ಜೆಡಿಎಸ್ ಜಲಧಾರೆಯಾತ್ರೆ ಆರಂಭಿಸಿದೆ.
ಕಬಿನಿ ಜಲಾಶಯದ ಬಳಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯದ ಆರೂವರೆ ಕೋಟಿ ಜನರ ಸಮಸ್ಯೆ ಬಗೆಹರಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ರಾಜ್ಯದಲ್ಲಿ ಅನೇಕ ನದಿ-ಉಪನದಿಗಳಿವೆ. ನಮ್ಮ ಭೂ ಪ್ರದೇಶದಲ್ಲಿ ಲಭ್ಯವಾಗುವ ನೀರು ಸಂಗ್ರಹ ಮಾಡಿ ಕುಡಿಯಲು, ವ್ಯವಸಾಯಕ್ಕೆ ಉಪಯೋಗಿಸಲು ಇನ್ನೂ ಸಾಧ್ಯವಾಗಿಲ್ಲ. ಇದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯಿಂದ ಕಳಸಕ್ಕೆ ನೀರು ತುಂಬಿಸುವ ಮೂಲಕ ಜಲಧಾರೆ ಯಾತ್ರೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದರು. ಮುಂದಿನ ಚುನಾವಣೆಯನ್ನು ಗಮನದಲ್ಲಿಕೊಂಡು 15 ಕಡೆ ನೀರು ಸಂಗ್ರಹಿಸೋ ಕೆಲಸ ಮಾಡುತ್ತಿದ್ದೇವೆ, ಜನರಿಗೆ ನೀರಿನ ಜಾಗೃತಿ ಮೂಡಿಸುತ್ತೇವೆ. ಇದಕ್ಕಾಗಿ ಎಷ್ಟು ಕೋಟಿ ಖರ್ಚಾದರೂ ಐದು ವರ್ಷದ ಅವಧಿಯಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇವೆ ಎಂದು ಭರವಸೆ ನೀಡಿದರು. ಜೊತೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ನವರದ್ದು ಭೂತದ ಬಾಯಲ್ಲಿ ಭಗದ್ಗೀತೆ ಹೇಳಿದಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಗೌರಿಬಿದನೂರು ನಗರಕ್ಕೆ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ, ನಗರದ ನದಿಗಡ್ಡೆ ಆಂಜನೇಯ ದೇವಸ್ಥಾನದ ಬಳಿ ಜನತಾ ಜಲಧಾರೆ ಅಭಿಯಾನಕ್ಕೆ ಚಾಲನೆ ನೀಡಿದರು.
ಜನತಾ ಜಲಧಾರೆ ಕಾರ್ಯಕ್ರಮವನ್ನ ಹಾಸನ ಜಿಲ್ಲೆಯ ಎರಡು ಕಡೆ ಆಯೋಜನೆಗೊಳಿಸಲಾಗಿತ್ತು. ಹೇಮಾವತಿ ನದಿ ಹರಿಯುವ ಸ್ಥಳವಾದ ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಕಳಸಕ್ಕೆ ನೀರು ಸಂಗ್ರಹಿಸಲಾಯಿತು.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯ ಮಲಪ್ರಭಾ ಉಗಮ ಸ್ಥಾನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಜನತಾ ಜಲಧಾರೆಗೆ ಚಾಲನೆ ನೀಡಿದರು. ಮಲಪ್ರಭೆಗೆ ಪೂಜೆ ಸಲ್ಲಿಸಿ ಐದು ಬಿಂದಿಗೆ ನೀರು ತುಂಬಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು.
ರಾಜ್ಯಾದ್ಯಂತ 15 ಸ್ಥಳಗಳಲ್ಲಿ ಜಲಸಂಗ್ರಹ ಮಾಡಲಾಗುತ್ತದೆ. ಮೇ 6ರೊಳಗೆ ಎಲ್ಲ ಗಂಗಾರಥ ಯಾತ್ರೆಗಳು ಬೆಂಗಳೂರು ತಲುಪಲಿದ್ದು, ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಳಸ ಸ್ಥಾಪನೆ ಮಾಡಿ ಎಲ್ಲ ಜಿಲ್ಲೆಗಳಿಂದ ಬರುವ ನೀರನ್ನು ಸಂಗ್ರಹಿಸುವ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಜೆಡಿಎಸ್ ಸಿದ್ಧತೆ ನಡೆಸಿದೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಣಕಹಳೆ ಮೊಳಗಿಸಿದೆ.