ಬೆಂಗಳೂರು : ಈಶ್ವರಪ್ಪ ಅವರ ರಾಜೀನಾಮೆ ಕೇಳುವುದು ಮಾತ್ರ ನಮ್ಮ ಉದ್ದೇಶವಿಲ್ಲ, 40% ಕಮಿಷನ್ ಪಡೆಯುತ್ತಿರುವ ಈ ಸರ್ಕಾರವನ್ನು ಕಿತ್ತು ಬೀಸಾಕಬೇಕಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ತಿಂಗಳು ನಾನೊಂದು ಸುದ್ದಿಗೋಷ್ಠಿ ಮಾಡಿದ್ದೆ ಆ ವೇಳೆ ದೇವರಾಜು ಅರಸು ನಿಗಮದಲ್ಲಿ, ಅಂಬೇಡ್ಕರ್ ನಿಗಮದಲ್ಲಿ ಬೋರ್ವೆಲ್ಗಳನ್ನು ಕೊರೆಸುವುದರಲ್ಲಿ ಕಮಿಷನ್ ನಡೆಯುತ್ತಿದೆ ಎಂದು ನಾನು ಆರೋಪಿಸಿದ ಬಳಿಕ ತನಿಖೆಗೆ ಆದೇಶ ಮಾಡಿದರು.
ಆದರೆ ಬೋರ್ವೆಲ್ ಕೊರೆಯುವುದನ್ನು ನಿಲ್ಲಿಸಿಲ್ಲ. ಕೆಲಸ ನಿಲ್ಲಿಸದೇ ಹೇಗೆ ತನಿಖೆ ಮಾಡುತ್ತಿದ್ದಾರೆ.ಕೋಟ ಶ್ರೀನಿವಾಸ ಪೂಜಾರಿ ಭ್ರಷ್ಟರಲ್ಲ ಎಂದುಕೊಂಡಿದ್ದೆ. ಈ ಕೆಲಸದಲ್ಲಿ ನಿಮಗೆ ಎಷ್ಟು ಕಿಕ್’ಬ್ಯಾಕ್ ಬರುತ್ತಿದೆ?
ಕಿಕ್’ಬ್ಯಾಕ್ ಸಿಗದಿದ್ದರೆ ಕೆಲಸವನ್ನು ಯಾಕೆ ನಿಲ್ಲಿಸಿಲ್ಲ? ಎಂದು ಪೂಜಾರಿಗೆ ವಾಗ್ದಾಳಿ ನಡೆಸಿದರು.
ಇನ್ನು ಜನ ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರ್ಕಾರ ನೌಕರಿ ಕೊಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. 75 ಸಾವಿರ ಅಭ್ಯರ್ಥಿಗಳು ಪಿ ಎಸ್ ಐ ಪರೀಕ್ಷೆ ಬರೆದಿದ್ದಾರೆ.ಪರೀಕ್ಷೆ ನಂತರ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮವಾಗಿರುವ ಸಾಧ್ಯತೆ ಇದೆ ಅಂತಾ ದೂರು ಕೊಟ್ಟರು, ಆಗ ಗೃಹಮಂತ್ರಿಗಳು ಆ ರೀತಿ ಅಗಿಲ್ಲ ಅಂತಾ ಸದನದಲ್ಲಿ ಉಡಾಫೆ ಉತ್ತರ ಕೊಟ್ಟಿದ್ದಾರೆ.
ಆದರೆ ಈಗ ಮತ್ತೆ ಗೃಹಮಂತ್ರಿಗಳು ಇದರಲ್ಲಿ ಅಕ್ರಮವಾಗಿರುವ ಸಾದ್ಯತೆ ಇದೆ ಅಂತಾ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಬಿಜೆಪಿಯ ಪದಾಧಿಕಾರಿಗಳೇ ಈ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದಾರೆ. ಅವರನ್ನು ಈ 40% ಸರ್ಕಾರ ಕಾಪಾಡುತ್ತಿದೆ. ಈಗ ಪರೀಕ್ಷೆ ಬರೆದ ಸುಮಾರು 75 ಸಾವಿರ ಅಭ್ಯರ್ಥಿ ಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಿಯಾಗಿ ತನಿಖೆ ನಡೆದರೆ ಇನ್ನೂ ಎರಡು ವಿಕೆಟ್ ಬೀಳುತ್ತವೆ ಎಂದು ಬಿಜೆಪಿ ನಾಯಕರ ಮೇಲೆ ಖರ್ಗೆ ಗಂಭೀರ ಆರೋಪ ಮಾಡಿದರು.