ಹಾಸನ: ಒಬ್ಬ ಗುತ್ತಿಗೆದಾರ 40 ಪರ್ಸೆಂಟ್ ಲಂಚ ಕೊಡ್ತಾರೆ ಎಂದರೆ ಆತ ಉತ್ತಮನಾ ? ಅವರು ಲಂಚ ಕೊಡ್ತಾರೆ ಎಂದು ಎಷ್ಟು ಧೈರ್ಯದಿಂದ ಹೇಳ್ತಾರೆ ? ಲಂಚ ಕೊಟ್ಟಿದ್ದರೆ ಅದೂ ತಪ್ಪಲ್ಲವೇ ? ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹಾಸನದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ದೋರನಹಳ್ಳಿಯ ನೂತನ ದೇವೀರಮ್ಮ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈಶ್ವರಪ್ಪನವ ಇಂದು ಸಂಜೆ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಳಿದಂತೆ ಪ್ರಕರಣದ ಸತ್ಯಾಸತ್ಯತೆ ಏನೆಂದು ತನಿಖೆಗೆ ಸಿಎಂ ಆದೇಶ ಮಾಡಿದ್ದಾರೆ. ತನಿಖೆ ಬಳಿಕ ಯಾರು ತಪ್ಪಿತಸ್ಥರು ಏನು ಷಡ್ಯಂತ್ರ ಇತ್ತು ಎನ್ನೋದು ಗೊತ್ತಾಗಲಿದೆ. ಇದರಲ್ಲಿ ಯಾರ್‍ಯಾರು ಇದಾರೆ, ಯಾರ ಷಡ್ಯಂತ್ರ ಇದೆ, ಯಾರು ಬಲಿಪಶು ಆದೋರು ಎನ್ನೋದು ರಾಜ್ಯದ ಜನರಿಗೆ ತಿಳಿಯಲಿ ಎಂದರು.
ಅದುವಲ್ಲದೇ ಆ ರೀತಿ 40 ಪರ್ಸೆಂಟ್ ನಡೆಯೋಕೆ ಸಾಧ್ಯನಾ ? 40 ಪರ್ಸೆಂಟ್ ಕೊಟ್ಟರೆ ಅವನು ಕೆಲಸ ಹೇಗೆ ಮಾಡ್ತಾರೆ ? ಈ 40 ಪರ್ಸೆಂಟ್ ಎನ್ನೋದೇ ಒಂದು ಕಟ್ಟು ಕತೆ. ಈ ಬಗ್ಗೆ ಸಿಎಂ ತನಿಖೆಗೆ ಆದೇಶ ಮಾಡಿದ್ದಾರೆ ಮುಂದೆ ಸತ್ಯ ಹೊರಗೆ ಬರಲಿದೆ. ಈಶ್ವರಪ್ಪನವರಿಗೂ ಕೂಡ ನ್ಯಾಯ ಸಿಗಲಿದೆ ಎಂದು ಹೇಳಿದರು.
ಇನ್ನು ಸುಧಾಕರ್ ಮೇಲೂ ಲಂಚದ ಆರೋಪ ವಿಚಾರ ಹಿನ್ನಲೆ ಅವರು ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡಿದಾರೆ. ಯಾರ್‍ಯಾರು ಸಚಿವರು ಶಾಸಕರು ಲಂಚ ತಗೊಂಡಿದ್ದಾರೆ ಹೇಳಲಿ.ಈಶ್ವರಪ್ಪರನ್ನ ರಾಜಕೀಯವಾಗಿ ಬಲಿಪಶು ಮಾಡಿದ್ದಾರೆ. ಖಂಡಿತಾ ಇದೆಲ್ಲದರಿಂದ ಈಶ್ವರಪ್ಪ ಹೊರಗೆ ಬರ್ತಾರೆ ನಮಗೆ ವಿಶ್ವಾಸ ಇದೆ. ವಿರೋಧ ಪಕ್ಷದ ಏನು ಮಾಡ್ತಾರೆ ಅದನ್ನ ಮಾಡಲಿ, ಇದರ ಬಗ್ಗೆ ರಾಜ್ಯದ ಜನರು ತೀರ್ಮಾನ ಮಾಡ್ತಾರೆ ಎಂದು ಗೋಪಾಲಯ್ಯ ಪ್ರತಿಕ್ರಿಯಿಸಿದರು.