ವಿಜಯನಗರ : ನಾನು ಈ ಹಿಂದೆಯೇ RDPR ಇಲಾಖೆಯಲ್ಲಿ ಕಮಿಷನ್ ದಂಧೆ ಹೆಚ್ಚು ನಡೆಯುತ್ತಿದೆ ಅಂತ ಹೇಳಿದ್ದೆ ಎಂದು ಹೊಸಪೇಟೆಯಲ್ಲಿ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನಲೆ ಸುದ್ದಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಯಲ್ಲಿ ಅವ್ಯವಹಾರ, ಕಮಿಷನ್ ದಂಧೆ ನಡೆಯುತ್ತಿದೆ ಎಂದು ಈ ಹಿಂದೆಯೇ ಹೇಳಿದ್ದೇ ಅದು ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಮೂಲಕ ಹೊರಬಿದ್ದಿದೆ ಅಂದರು.
ಇನ್ನು ರಾಜ್ಯ ಸರ್ಕಾರ ಮೊದಲು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಬೇಕು. ಬಳಿಕ ತನಿಖೆಗೆ ಆದೇಶ ಮಾಡಿ, ಸತ್ಯಾಸತ್ಯತೆ ಗೊತ್ತಾಗುತ್ತದೆ. ಈ ಹಿಂದೆ ಜಾರ್ಜ್ ಅವರ ಮೇಲೆ ಆರೋಪ ಕೇಳಿ ಬಂದಾಗ ಅವರು ರಾಜೀನಾಮೆ ನೀಡಿದರು. ಆ ನಂತರ ತನಿಖೆಯಾಯ್ತು. ಹೀಗಾಗಿ ಮೊದಲು ಈಶ್ವರಪ್ಪ ಅವರು ರಾಜೀನಾಮೆ ನೀಡಲಿ ಎಂದು ಕಿಡಿಕಾರಿದರು.
ಅದುವಲ್ಲದೇ ನಮ್ಮ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರೂ ಕೂಡ ಒತ್ತಾಯ ಮಾಡಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದೆ. ಇಡೀ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತಿದೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಈ ರಾಜ್ಯದ ಎಲ್ಲಾ ಶಾಸಕರಿಗೂ ಈ ವಿಚಾರ ಗೊತ್ತು, ಆದ್ರೆ ಯಾರೂ ಕೂಡ ಕಮಿಷನ್ ವಿಚಾರ ಮಾತನಾಡೋಲ್ಲಾ ನಾನು ನೇರವಾಗಿ ಹೇಳುತ್ತಿದ್ದೇನೆ. ಈ ಸಂಸ್ಕೃತಿ ಸರಿಯಲ್ಲಾ, ನಮ್ಮ ಸರ್ಕಾರ ಇದ್ದಾಗ ಈ ರೀತಿ ಕಮಿಷನ್ ದಂಧೆ ಎಲ್ಲಾ ನಡೆಯುತ್ತಿರಲಿಲ್ಲ ಎಂದ ಜೆ.ಎನ್. ಗಣೇಶ್ ಹೇಳಿದರು.