Monday, December 23, 2024

ಟಾರ್ಗೆಟ್​ಗೆಲ್ಲಾ ನಾನು ಹೆದರಲ್ಲ – ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಖಡಕ್​ ಆಗಿ ಪ್ರತಿಪಕ್ಷಗಳ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷಗಳು ಕೆ.ಎಸ್​​ ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಇದನ್ನು ಸಿ.ಎಂ. ಬೊಮ್ಮಾಯಿ ಮತ್ತು ನಮ್ಮ ರಾಜ್ಯಾಧ್ಯಕ್ಷರಿಗೂ ತಿಳಿಸಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಸದ್ಯ ಈ ಪ್ರಕರಣದ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು. ಕಾನೂನುಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ಡೆತ್ ನೋಟೇ ಬರೆದಿಲ್ಲ. ಡೆತ್ ನೋಟ್ ಬರೆಯದೇ, ಸುಳ್ಳು ಸುದ್ಧಿ ಹಬ್ಬಿಸಿದ್ದಾರೆ. ನನಗೆ ಎಲ್ಲೆಡೆಯಿಂದ ನನಗೆ ಫೋನ್ ಬರ್ತಿದೆ. ಯಾವುದೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ ಅಂದರು.

ಇನ್ನು ಗಣಪತಿ ವಿಚಾರದಲ್ಲಿ, ಗಣಪತಿ ಡೆತ್ ನೋಟ್ ಬರೆದಿದ್ದರು. ಗಣಪತಿ ಶವ ಬಳಿಯೇ, ಡೆತ್ ನೋಟ್ ಇತ್ತು. ನಾನು ವಾಟ್ಸಪ್​​ಲಿ ಟೈಪ್ ಮಾಡುತ್ತೇನೆ ಇಂತಹವರ ಸಾವಿಗೆ ಇವರೇ ಕಾರಣ ಅಂತ ಹೇಳಿದ್ರೆ, ನಂಬುತ್ತಾರಾ(?) ಎಂದು ಮರುಪ್ರಶ್ನೆ ಮಾಡಿದರು.

ಆಮೇಲೆ ಇದುವರೆಗೂ ನಾನು ಸಂತೋಷ್ ಮುಖವನ್ನೇ ನೋಡಿಲ್ಲ. ಆದರೆ, ನೂರಾರು ಸಲ ನಮ್ಮನೆಗೆ ಬಂದಿದ್ದರು ಎಂದು ಹೇಳಿದ್ದಾರಂತೆ. ಹಲವಾರು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಇವರಿಗೆ ಫ್ಲೈಟ್ ಟಿಕೆಟ್ ಮಾಡಿಸಿಕೊಟ್ಟವರು ಯಾರು(?) ನಾನು ಬಡತನದಲ್ಲಿದ್ದೇನೆ ಎಂದು ಹೇಳಿದ್ದರು. ಖಾಸಗಿ ಚಾನಲ್ ಮತ್ತು ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಸಂತೋಷ್ ಪಾಟೀಲ್​​ ನೋಟಿಸ್​ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಈ ಬಗ್ಗೆ ನನಗೆ ಅನುಮಾನವಿದೆ ಎಂದಿದ್ದಾರೆ.

ಡಿ.ಕೆ ಶಿವಕುಮಾರ್​-ಸಿದ್ದರಾಮಯ್ಯಗೆ ಗೊತ್ತಾಗುವುದಿಲ್ವಾ : ಈಶ್ವರಪ್ಪ ತಿರುಗೇಟು

ಅದುವಲ್ಲದೇ, ಕಾನೂನು, ನೀತಿ, ನಿಯಮ ಗಾಳಿಗೆ ತೂರಿ, ಇಲಾಖೆ ಕಾರ್ಯ ನಿರ್ವಹಿಸಲ್ಲ. ಇದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಗೊತ್ತಾಗುವುದಿಲ್ಲವಾ(?) ಅಮೂಲಾಗ್ರ ತನಿಖೆಯಾದಾಗಲೇ, ಈ ಬಗ್ಗೆ ತಿಳಿಯಲಿದೆ. ವಾಟ್ಸಪ್​ಲಿ ಮಾಡಿರುವ ಮೆಸೇಜ್ ಡೆತ್ ನೋಟ್ ಆಗುತ್ತಾ(?) ಏನೇನೋ ಟಾರ್ಗೆಟ್ ಮಾಡಿದ್ರು, ಈ ಟಾರ್ಗೆಟ್​ಗೆ ಹೆದರುತ್ತಿನಾ(?) ಇಂತಹ ಟಾರ್ಗೆಟ್​ಗೆಲ್ಲಾ ನಾನು ಹೆದರಲ್ಲ. ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ ಅವರಿಗೆ ನಿರಾಸೆಯಾಗಿದೆ ಎಂದು ವಿರೋಧ ಪಕ್ಷದವರಿಗೆ ಟಾಂಗ್​ ಕೊಟ್ಟಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್​ಗೆ ತಲೆ ಕೆಟ್ಟಿದ್ದರೆ, ನಾನೇನು ಮಾಡಲಿ – ಈಶ್ವರಪ್ಪ ಆಕ್ರೋಶ

ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಶಾಸಕರೊಬ್ಬರು, ಸಂತೋಷ್ ಪಾಟೀಲ್​ಗೆ ಬೆದರಿಕೆ ಹಾಕಿದ್ದರು ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್​ಗೂ ತಲೆ ಕೆಟ್ಟಿದ್ದರೆ, ನಾನೇನು ಮಾಡಲಿ. ನಾನು ಬಗ್ಗಬೇಕು ಅಂತ ಸುಖಾಸುಮ್ಮನೆ ಆರೋಪ ಮಾಡಬಾರದು.  ಹೆಣ್ಣುಮಕ್ಕಳ ಮೇಲೆ ನನಗೆ ಬಹಳ ಗೌರವವಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಮೇಲೂ ಗೌರವವಿದೆ. ಮುಸಲ್ಮಾನಿಗೆ ನಾವು ಗೌರವ ನೀಡುತ್ತೇವೆ. ಆದರೆ, ಗೂಂಡಾ ಮುಸಲ್ಮಾನರಿಗೆ ನಾವು ಈಗಲೂ ಎಚ್ಚರಿಕೆ ನೀಡುತ್ತೇವೆ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದರು.

RELATED ARTICLES

Related Articles

TRENDING ARTICLES