Monday, December 23, 2024

ತಮಿಳಿಗರಿಗಿರುವ ಭಾಷಾಭಿಮಾನ ಕನ್ನಡಿಗರಿಗೇಕಿಲ್ಲ?

ಅಮಿತ್ ಶಾ ಹಿಂದಿ ಹೇರಿಕೆ ಮಾತು ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ವಿಪಕ್ಷ ನಾಯಕರು ಹೇಳಿಕೆಗೆ ಕೆಂಡಮಂಡಲರಾಗಿದ್ದಾರೆ. ಇತ್ತ ಬಿಜೆಪಿ ನಾಯಕರು ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಇದೇ ವಿಚಾರ ಚುನಾವಣೆಗೆ ತೆಗೆದುಕೊಂಡು ಹೋಗೋದಕ್ಕೆ ವಿಪಕ್ಷಗಳು ಪ್ರಯತ್ನಿಸುತ್ತಿದೆ.

ಏಕತೆಯಲ್ಲಿ ವಿವಿಧತೆ ಹೊಂದಿರುವ ಭಾರತದಲ್ಲಿ ನೂರಾರು ಭಾಷೆಗಳಿವೆ.. ಇದ್ರ ಜೊತೆಗೆ, ಅಧಿಕೃತ ಭಾಷೆಗಳು ಇವೆ… ಈ ಮಧ್ಯೆ, ಸಾವಿರಾರು ವರ್ಷಗಳಿಂದಲೂ ಪ್ರಾದೇಶಿಕವಾಗಿ ಮಾತನಾಡುತ್ತಿರುವ ಭಾಷೆ ಜೊತೆಗೆ ಹಿಂದಿ ಬಳಕೆ ಮಾಡಲೇಬೇಕು ಎನ್ನುವ ಅಮಿತ್‌ ಶಾ ಹೇಳಿಕೆ ಸಾಕಷ್ಟು ಸುದ್ದಿಯಾಗ್ತಿದೆ. ಈಗಾಗಲೇ ತಮಿಳುನಾಡು, ಕೇರಳದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗ್ತಿದೆ..

ಹಿಂದಿ ಭಾಷೆಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಬೆಳೆಸಬೇಕು ಎನ್ನುವ ವಿಚಾರ ಹಿಂದಿಯೇತರ ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿ ಬಾರಿಯೂ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ವಿರೋಧವಿದೆ ಎಂದು ತಮಿಳುನಾಡು ತೀವ್ರವಾಗಿಯೇ ಖಂಡಿಸಿದೆ.

ಅಮಿತ್​ ಶಾ ಹೇಳಿಕೆಗೆ ಎ.ಆರ್.ರೆಹಮಾನ್​ ತಿರುಗೇಟು ನೀಡಿದ್ದಾರೆ. ಆಸ್ಕರ್​, ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ಭಾರತದ ಅಗ್ರಮಾನ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಎ.ಆರ್​.ರೆಹಮಾನ್​ ಅವರು ತಮಿಳಿನ ಮಹತ್ವ ಮತ್ತು ತಮಿಳಿಗರಿಗೆ ಭಾಷೆ ಎಂಬುದು ಏನಾಗಿದೆ ಎಂಬುದರ ಅರ್ಥವನ್ನು ಎತ್ತಿ ತೋರಿಸುವ ಪೋಸ್ಟರ್​ನ್ನು ಟ್ವೀಟ್​ ಮಾಡಿದ್ದಾರೆ. ಗೃಹ ಸಚಿವ ಅಮಿತ್​ ಶಾ ಅವರ ಇಂಗ್ಲಿಷ್‌ಗೆ ಹಿಂದಿ ಪರ್ಯಾಯವಾಗಿದೆ ಎಂದು ನೀಡಿರುವ ಹೇಳಿಕೆಯನ್ನು ಕಟುವಾಗಿಯೇ ಟೀಕಿಸಿದ್ದಾರೆ.

ಇನ್ನು, ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಅಮಿತ್‌ ಶಾ ಹೇಳಿಕೆಗೆ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವ್ರು ಹಿಂದಿ ಹೇರಿಕೆಯನ್ನು ಬಿಲ್ ಕುಲ್ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಅತ್ತ ಮಾಜಿ ಸಿಎಂ ಕುಮಾರಸ್ವಾಮಿ ಅಮಿತ್ ಶಾಗೆ ಇಂಗ್ಲೀಷ್ ಬರೋದಿಲ್ವಾ? ಪ್ರಾದೇಶಿಕ ಭಾಷೆ ಮೇಲೆ ಶಾಗೆ ಯಾಕಿಷ್ಟು ದ್ವೇಷ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಅಂತ ತಿರುಗೇಟು ನೀಡಿದ್ದಾರೆ.

ನೀಟ್ ಕಾರಣಕ್ಕೆ ಈಗಾಗಲೇ ಬಡ ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಶಿಕ್ಷಣ ಗಗನ ಕುಸುಮವಾಗಿದೆ. ಇದಕ್ಕೆ ಪೂರಕವಾಗಿ ಸರಕಾರವು ತಜ್ಞವೈದ್ಯ ಕೋರ್ಸುಗಳ ವಿಚಾರದಲ್ಲಿ ಹಣವಂತರಿಗೆ ಜೈ ಎನ್ನುತ್ತಿದೆ. ಇದು ಘೋರ ಅನ್ಯಾಯ ಮಾತ್ರವಲ್ಲ, ಜನದ್ರೋಹಿ ಹೆಜ್ಜೆ. ಕರ್ನಾಟಕಕ್ಕೆ ಬಹುದೊಡ್ಡ ನಷ್ಟ. ಆರೋಗ್ಯ ದಿನದ ನೆಪಕ್ಕೆ ಶುಭಾಶಯ ಕೋರಿದರೆ ಸಾಲದು. ನಮ್ಮ ವೈದ್ಯರ ಹಿತರಕ್ಷಿಸುವ ಬದ್ಧತೆಯೂ ಬೇಕು. ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವ ಪ್ರಾಮಾಣಿಕತೆ ಅಗತ್ಯ. ಸರಕಾರ ಅಷ್ಟೂ ಸೀಟುಗಳನ್ನು ಮರಳಿ ಪಡೆಯಬೇಕು ಎಂಬುದು ನನ್ನ ಆಗ್ರಹ. ಏಕೆಂದರೆ, ಆ ಸೀಟುಗಳು ಕನ್ನಡಿಗರಿಗೆ ಸೇರಿದ್ದವು ಅಂತ ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇಷ್ಟೆಲ್ಲಾ ವಿರೋಧ ಕೇಳಿ ಬರ್ತಿದ್ರೂ.. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಮಾತ್ರ ಅಮಿತ್‌ ಶಾ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ..

ಒಟ್ಟಿನಲ್ಲಿ ಹಿಂದಿ ಹೇರಿಕೆ ವಿರುದ್ದ ವಿಪಕ್ಷಗಳು ಗುಡುಗಿವೆ. ಹೀಗೆ ಕೇಂದ್ರ ವರ್ತಿಸಿದ್ರೆ ಬೀದಿಗಿಳಿದು ಹೋರಾಟ ನಡೆಸೋದಾಗಿ ವಿಪಕ್ಷಗಳು ಕಿಡಿಕಾರಿವೆ. ಆದ್ರೆ, ಬಿಜೆಪಿ ನಾಯಕರು ಮಾತ್ರ ಸಮರ್ಥನೆ ಮಾಡಿಕೊಳ್ತಿರೋದು ವಿಪರ್ಯಾಸವೇ ಸರಿ

RELATED ARTICLES

Related Articles

TRENDING ARTICLES