ಕೋಲಾರ : ಹಿಜಾಬ್, ಹಲಾಲ್ ಹಾಲಾಹಲದ ಬೆನ್ನಲ್ಲೇ ಮಾವಿನ ಮಹಾಯುದ್ಧ ತಾರಕಕ್ಕೇರಿದೆ. ಈ ಬೆನ್ನಲ್ಲೆ ದಕ್ಷಿಣ ಏಷ್ಯಾದ ಅತಿ ದೊಡ್ಡ ಮಾವಿನ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲಾರದ ಶ್ರೀನಿವಾಸಪುರ ಮಾವಿನ ಮಾರುಕಟ್ಟೆಯಲ್ಲಿ ಎಲ್ಲಾ ರೈತರು, ಗ್ರಾಹಕರು ಹಾಗೂ ವರ್ತಕರು ಸೌಹಾರ್ಧತೆಯ ಸಂದೇಶ ಸಾರಿದ್ದಾರೆ.ಇಲ್ಲಿನ ಮಾವಿಗೆ ವಿಶ್ವದೆಲ್ಲೆಡೆ ಬಹುಬೇಡಿಕೆ ಇದೆ.ಇಲ್ಲಿನ ಶೇ.80 ರಷ್ಟು ಮಾವು ಬೆಳೆಗಾರರು ಹಿಂದೂಗಳಾಗಿದ್ದು, ಶೇ.90 ರಷ್ಟು ವರ್ತಕರು ಮುಸ್ಲಿಮರೇ. ಹೀಗಿದ್ದರೂ ಇವರೆಲ್ಲರೂ ಶಾಂತಿ ಸೌಹಾರ್ದತೆಯಿಂದ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಮಗೆ ಯಾವುದೇ ಭೇದ-ಭಾವವಿಲ್ಲ ಅಂತಾ ಸ್ಪಷ್ಟ ಸಂದೇಶ ಸಾರಿದ್ದಾರೆ.ಇಂಥಾ ಅತಿ ದೊಡ್ಡ ಮಾರುಕಟ್ಟೆಯಲ್ಲಿ ಧರ್ಮಸಂಘರ್ಷದ ಮಾತೇ ಇಲ್ಲದಾಗಿರೋದು ಸಂತಸದ ವಿಚಾರ.
ಶ್ರೀನಿವಾಸಪುರ ಮಾವಿನ ಮಾರುಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಮೊದಲಿನಿಂದಲೂ ಇಲ್ಲಿ ಮುಸ್ಲಿಂ ಸಮುದಾಯದವ್ರೇ ಹೆಚ್ಚಿನ ಮಂಡಿಗಳ ಮಾಲೀಕರಾಗಿದ್ದಾರೆ. ಸದ್ಯ ಈಗ 140 ಮಂಡಿಗಳು ಚಾಲ್ತಿಯಲ್ಲಿದ್ದು, ಇದರಲ್ಲಿ 30 ಮಂಡಿಗಳು ಹಿಂದೂ ಧರ್ಮಕ್ಕೆ ಸೇರಿದೆ. ಸೀಸನ್‌ನಲ್ಲಿ ಪ್ರತಿ ದಿನ ಸಾವಿರಾರು ಟನ್ ಮಾವು ಮಾರುಕಟ್ಟೆಗೆ ಬರುತ್ತೆ. ತ್ವರಿತವಾಗಿ ರಫ್ತು ಮಾಡುವ ಅವಶ್ಯಕತೆ ಇದೆ.
ಹಿಂದೂ ಹಾಗೂ ಮುಸ್ಲಿಂ ಸಮುದಾಯದಲ್ಲಿ ರೈತರಿದ್ದಾರೆ. ಹಿಂದೂ ಸಮುದಾಯದವ್ರೂ ಹೆಚ್ಚಿನ ಮಂಡಿಗಳನ್ನ ತೆರೆದು ವ್ಯಾಪಾರ ಮಾಡ್ತಾರೆ ಅಂದ್ರೆ ನಾವು ಬೆಂಬಲ ನೀಡ್ತೇವೆ. ಆದ್ರೆ, ಮುಸ್ಲಿಂರಿಗೆ ಮಾರಾಟ ಮಾಡಬೇಡಿ ಎಂದು ವಿಷ ಬೀಜ ಬಿತ್ತಬಾರದು ಎಂಬುದು ಬೆಳೆಗಾರರ ಸಂಘ ಹಾಗೂ ವ್ಯಾಪಾರಸ್ಥರ ಆಗ್ರಹ.
ಒಟ್ಟಿನಲ್ಲಿ ವಿಶ್ವವಿಖ್ಯಾತ ಮಾವಿನ ತವರು ಅಂತಾನೆ ಹೆಸರುವಾಸಿ ಆಗಿರುವ ಶ್ರೀನಿವಾಸಪುರ ಮಾರುಕಟ್ಟೆ ಸಮಸ್ತ ಕರುನಾಡಿಗೆ ಸೌಹಾರ್ದತೆಯ ಸಂದೇಶ ಸಾರಿದೆ.