ಮೈಸೂರು : ಸಮಾಜ ಹಾಳು ಮಾಡಿ, ಕುಟುಂಬಗಳ ಬೀದಿಗೆ ತಂದು ಮತ್ತೆ ಸಿಎಂ ಆಗುವ ಆಸೆ ನನಗೆ ಇಲ್ಲ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಗಿರುವ ಚಂದ್ರು ಕೊಲೆ ಪ್ರಕರಣ ವಿಚಾರ ಹಿನ್ನಲೆ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ನಿನ್ನೆ ಬೆಳಗ್ಗೆ ಆಗಿರೋ ಕೊಲೆ ಇದು. ಇದನ್ನು ಸೂಕ್ಷ್ಮವಾಗಿ ಜನ ಗಮನಿಸಬೇಕು. ಪೊಲೀಸರು ಒಂದು ಹೇಳಿಕೆ ಕೊಡುತ್ತಿದ್ದಾರೆ, ಗೃಹ ಸಚಿವರು ಕೊಲೆ ವಿಚಾರದಲ್ಲಿ ಒಂದೊಂದು ನಿಮಿಷಕ್ಕೂ ಒಂದು ಹೇಳಿಕೆ ಕೊಡುತ್ತಾರೆ. ದಲಿತ ಸಮಾಜದ ಯುವಕ ಅಂತಾ ಹೇಳಿದ್ದಾರೆ. ಅವರ ಹೇಳಿಕೆ ಅತ್ಯಂತ ಸಣ್ಣತನದ್ದು ಮತ್ತು ಸಮಾಜದ ಶಾಂತಿ ಕದಡುತ್ತದೆ. ತಮ್ಮ ಸ್ಥಾನದ ಜವಾಬ್ದಾರಿಯ ಅರಿವಿಲ್ಲ ಇದರಲ್ಲಿ ಯಾರದು ಸತ್ಯ…? ಮಂತ್ರಿಯೇ ತನಿಖೆಗೆ ಮುನ್ನ ತೀರ್ಪು ಕೊಟ್ಟಿದ್ದಾರೆ , ಅವರೇನೂ ಕಾಮಿಡಿ ರೋಲ್ ಮಾಡಲು ಗೃಹ ಸಚಿವರಾಗಿದ್ದಾರಾ? ಅಥವಾ ಗೃಹ ಸಚಿವರು ವಿಲನ್ ರೋಲ್ ಮಾಡುತ್ತೀದ್ದಿರಾ? ಹೀಗೆ ವಿಷಯ ಅರಿಯದೆ ಕ್ಷಣಕೊಂದು ಹೇಳಿಕೆ ಕೊಡುವುದು ಗೃಹ ಸಚಿವರ ಸ್ಥಾನಕ್ಕೆ ಗೌರವ ತರಲ್ಲ ಎಂದು ಪ್ರಶ್ನೆಗಳ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಮಾಜ ಹಾಳು ಮಾಡಿ, ಕುಟುಂಬಗಳ ಬೀದಿಗೆ ತಂದು ಮತ್ತೆ ಸಿಎಂ ಆಗುವ ಆಸೆ ನನಗೆ ಇಲ್ಲ. ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದರು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೌನವು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಹಿಂದೂ ಮುಸ್ಲಿಂ ಮಧ್ಯೆ ಕಂದಕ ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಮುಸ್ಲಿಂ ಯುವಕರು ಅಂತಾ ಆರೋಪಿಗಳ ಮೇಲೆ ಕನಿಕರ ತೋರಿಸಿ ಎಂದು ಹೇಳುವುದಿಲ್ಲ ಆದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಜನರ ಕೊಲೆಯಾದವು. ಆದರೆ, ಕೊಲೆ ವಿಚಾರದಲ್ಲಿ ಬಿಜೆಪಿ ಸೆಲೆಕ್ಟಿವ್ ಆಗಿ ಕಾರ್ಯ ಪ್ರವೃತವಾಗುತ್ತಿದೆ ಇದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ನಾನು ಯಾವುದೇ ಪಕ್ಷದ ಓಲೈಕೆಯಲ್ಲಿಲ್ಲ. ನಾನು ಎರಡು ರಾಜಕೀಯ ಪಕ್ಷಗಳನ್ನು ಈ ರಾಜ್ಯದಿಂದ ಕಿತ್ತಾಕುವ ಸುಪಾರಿಯನ್ನು ಜನರಿಂದ ಪಡೆದಿದ್ದೇನೆ. ನಾನು ಯಾವ ಸಮಾಜದ ಓಲೈಕೆಗೂ ರಾಜಕಾರಣ ಮಾಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.