ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಆಗುತ್ತಿರುವಂತೆ ರಾಜಕೀಯ ಪಕ್ಷಗಳು ತಮ್ಮ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಿವೆ. ಮೊನ್ನೆಯಷ್ಟೇ ಸಿದ್ಧಗಂಗಾಮಠಕ್ಕೆ ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಕೊಟ್ಟಿದ್ರು ಅದಕ್ಕೂ ಒಂದು ದಿನ ಮುಂಚೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಭೇಟಿ ಕೊಟ್ಟು ಚುನಾವಣೆ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳ ಜತೆಗೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ತನ್ನ ಪಕ್ಷ ಸಂಘಟನೆಯ ಕಾರ್ಯವನ್ನು ಚುರುಕುಗೊಳಿಸಿದೆ. ಸದ್ಯ ಮೂರು ಪಕ್ಷಗಳು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆದ್ದು ಅಧಿಕಾರ ಹಿಡಿಯುವ ತವಕದಲ್ಲಿವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದೆ. ಹೇಗಾದ್ರೂ ಮಾಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷದ ನಾಯಕರು ಶಪಥ ತೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಪಕ್ಷದ ಹೈಕಮಾಂಡ್ಗೆ ತಿಳಿದಿರುವ ವಿಷಯವೇ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆವಹಿಸಲು ಹದ್ದಿನಕಣ್ಣು ಇಟ್ಟಿದೆ.
ಪಕ್ಷಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ಇಬ್ಬರು ನಾಯಕರನ್ನು ಜೊತೆಯಾಗಿ ನಡೆಸಿಕೊಂಡು ಹೋಗುವ ಆಲೋಚನೆಯಲ್ಲಿ ಕೈ ಹೈಕಮಾಂಡ್ ಚಿಂತನೆ ನಡೆಸಿದೆ. ಡಿ.ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ. ಆದರೆ ಇದು ಡಿಕೆಶಿಯಿಂದ ಮಾತ್ರ ಸಾಧ್ಯವಾಗಲ್ಲ ಅನ್ನೋದು ಹೈಕಮಾಂಡ್ಗೂ ಗೊತ್ತಿರುವ ವಿಚಾರ. ಡಿಕೆಶಿ ಮತ್ತು ಸಿದ್ದರಾಮಯ್ಯ ಒಟ್ಟಾಗಿ ಚುನಾವಣೆ ಎದುರಿಸಿದರೇ ಕಾಂಗ್ರೆಸ್ ಪಕ್ಷ ಅಂದುಕೊಂಡಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗುತ್ತದೆ.
ಸದ್ಯ ಏನೇ ಆಗಲಿ ಪಂಜಾಬ್ನಲ್ಲಿ ನಡೆದ ಘಟನೆ ಕರ್ನಾಟಕದಲ್ಲೂ ಆಗಬಾರದು ಎಂಬುದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವಾಗಿದ್ದು, ರಾಜ್ಯಕ್ಕೆ ಕಾಂಗ್ರೆಸ್ ವರಿಷ್ಠರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ. ಎಲ್ಲವೊ ಅಂದುಕೊಂಡಂತೆ ನಡೆದರೇ ಮುಂದಿನ ತಿಂಗಳು ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಅದುವಲ್ಲದೇ ಎರಡು ತಿಂಗಳಿಗೊಮ್ಮೆ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿ, ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಗಳು ದಟ್ಟವಾಗಿದೆ.
ಚುನಾವಣೆಯನ್ನು ಒಗ್ಗಟಾಗಿ ಎದುರಿಸಿದರೇ ಮಾತ್ರ ಗೆಲ್ಲಬಹುದು ಅನ್ನೋದು ಹೈಕಮಾಂಡ್ ಅರಿವಿಗೆ ಬಂದಿದೆ. ಹೀಗಾಗಿ ಇಬ್ಬರು ನಾಯಕರ ಚುಟುವಟಿಕೆ ಮೇಲೆ ಹೈಕಮಾಂಡ್ ಹದ್ದಿನ ಕಣ್ಣು ಇಟ್ಟಿದೆ.
ಒಟ್ಟಾರೇಯಾಗಿ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳ ಗರಿಗೆದರಿವೆ.