ಚಿತ್ರದುರ್ಗ: ‘ಹಿಜಾಬ್ ಬಗ್ಗೆ ಕಾಂಗ್ರೆಸ್ ನಾಯಕರು ಗಡುಸುತನದಿಂದ ಮಾತಾಡುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಅಶಾಂತಿ ಮೂಡಿಸಲು ಟ್ರ್ಯಾಪ್ ಮಾಡುತ್ತಿದೆ. ಭಾವನಾತ್ಮಕವಾಗಿ ತೆಗೆದುಕೊಂಡು ಮಾತಾಡದಂತೆ ಸೂಚಿಸಿದ್ದೇನೆ ಎಂದರು.
ಇನ್ನು ಯಾರು ಮಾತಾಡಬೇಕು ಅವರೇ ಮಾತಾಡಬೇಕು. ಎಲ್ಲರೂ ಪ್ರತಿಕ್ರಿಯಿಸಬಾರದೆಂದು ಸೂಚನೆ ನೀಡಿದ್ದು ನಿಜ. ನಾವು ಯಾವ ಸಿಂಹಾಸನ ಇಟ್ಟುಕೊಂಡಿಲ್ಲ, ಪ್ರಜಾಪ್ರಭುತ್ವ ಪಾಲಿಸುತ್ತೇವೆ. ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಸ್ಥಾನ ನಿರ್ವಹಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಸದ್ಯ ಸಚಿವ ಕೆ.ಎಸ್ ಈಶ್ವರಪ್ಪ ದೇಶದ್ರೋಹಿ, ರಾಷ್ಟ್ರಧ್ವಜ ದ್ರೋಹಿ, ಸಂವಿಧಾನ ದ್ರೋಹಿ ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ. ಸಿಎಂ ಮಾತಿಗೆ ಉತ್ತರ ಕೊಡಬಹುದು, ರಸ್ತೇಲಿ ಹೋಗೋರಿಗೆಲ್ಲ ಉತ್ತರಿಸಲ್ಲ ಎಂದು ಟೀಕಿಸಿದರು.
ಇದೇ ವೇಳೆ ಹಿರಿಯೂರಲ್ಲಿ ಫ್ಲೆಕ್ಸ್ ವಿಚಾರದಲ್ಲಿ ಕೈ ಕಾರ್ಯಕರ್ತರ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು, ಆಚಾರ-ವಿಚಾರ ಪ್ರಚಾರಕ್ಕೆ ಪೈಪೋಟಿ ಇದೆ ಅಂದರೆ ಅಭಿನಂದನೆ ಎಂದು ಡಿ.ಕೆ ಶಿವಕುಮಾರ್ ಅವರು ಸಮರ್ಥನೆ ಮಾಡಿಕೊಂಡರು.
ಅಜಾನ್ ವಿಚಾರ ಇಂದು ನಿನ್ನೆಯ ವಿಚಾರ ಅಲ್ಲ, ಧರ್ಮದ ವಿಚಾರ ಅಲ್ಲ. ಬೆಳಗ್ಗೆ ಪ್ರಾರ್ಥನೆಗಾಗಿ ಒಂದು ಇತಿಮಿತಿಯಲ್ಲಿ ಒಂದು ಕೂಗು. ಇಡೀ ಪ್ರಪಂಚದಲ್ಲಿ ಅಜಾನ್ ಬಗ್ಗೆ ದೊಡ್ಡ ಚರ್ಚೆ ಆಗಿದೆ. ನಾವು ನೀವು ಚರ್ಚೆ ಮಾಡುವ ಅಗತ್ಯ ಇಲ್ಲ. ಕಾನೂನು, ಸಂವಿಧಾನ ಇದೆ. ಪದ್ಧತಿ ಉಳಿಸಿಕೊಂಡು ಹೋಗಬೇಕಿದೆ. ಅಲಾರಾಮ್ ಇಟ್ಟುಕೊಂಡು ಎಚ್ಚರಗೊಳ್ಳಲಿ. ಪ್ರಧಾನಿ, ಗೃಹ ಸಚಿವರಿಗೆ ಅವರು ಈ ಬಗ್ಗೆ ಕೇಳಲಿ. ಕಾನೂನು ಇದ್ದರೇ ಜಡ್ಜ್ಮೆಂಟ್ ಮಾಡಿಸಲು ಹೇಳಿ ಎಂದು ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದರು.