ಬೆಂಗಳೂರು : ರಾಜ್ಯದಲ್ಲಿ ಪಕ್ಷ ಸಂಘಟಿಸಲು ಕಾಂಗ್ರೆಸ್ ಭಾರೀ ಕಸರತ್ತು ನಡೆಸುತ್ತಿದೆ. ಆದ್ರೆ, ಜಾತ್ಯಾತೀತ ಪಕ್ಷದ ಸಂಘಟನೆಗೆ ಮಗ್ಗುಲ ಮುಳ್ಳಾಗಿರುವುದು ಕಮ್ಯುನಲ್ ವಿಚಾರಗಳು. ಇದನ್ನು ನುಂಗಲು ಆಗದೆ, ಉಗುಳಲೂ ಆಗದೆ ಇಕ್ಕಟಿನ ಪರಿಸ್ಥಿತಿಯಲ್ಲಿ ‘ಕೈ’ ನಾಯಕರು ಇದ್ದಾರೆ. ಹೀಗಾಗಿ ರಾಜ್ಯದ ನಾಯಕರಿಗೆ ರಾಹುಲ್ ಗಾಂಧಿ ಹೊಸ ಟಾಸ್ಕ್ ನೀಡಿದ್ದಾರೆ.
ರಾಜ್ಯದಲ್ಲಿ ದಿನಕೊಂದು ಕಮ್ಯುನಲ್ ವಿಚಾರವಾಗಿ ಚರ್ಚೆಗಳು ತಾರಕಕ್ಕೇರುತ್ತಿವೆ. ಒಂದು ತಿಂಗಳು ಬಹುಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿವಾದ, ಹೈಕೋರ್ಟ್‌ನಿಂದ ತೀರ್ಪು ಬಂದ ಬಳಿಕ ಕಮ್ಯುನಲ್ ವಿವಾದಗಳು ಮುಕ್ತಾಯವಾದ್ವು ಅಂತಾ ಜನ ತಿಳಿದಿದ್ರು. ಆದ್ರೆ, ಆಗಿದ್ದೆ ಬೇರೆ. ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದ ಅಂಗಡಿಗೆ ನಿಷೇಧ ಹಾಕಿದ ವಿವಾದ ಸೃಷ್ಟಿಯಾಯ್ತು. ಟಿಪ್ಪು ಸುಲ್ತಾನ್ ಪಾಠ ಪಠ್ಯದಿಂದ ತೆಗೆಯಬೇಕು ಎಂಬ ವಿವಾದ, ಹಲಾಲ್ ಕಟ್ ವಿವಾದ, ಈಗ ಮಸೀದಿ ಧ್ವನಿವರ್ಧಕ ತೆಗೆಯಬೇಕು ಎಂಬ ವಿವಾದ ಚರ್ಚೆಗೆ ಬಂದಿದೆ. ಈ ಎಲ್ಲಾ ವಿವಾದಗಳು ಧರ್ಮಗಳ ನಡುವೆ ಬಿರುಕು ಮೂಡಿಸಿದೆ. ಈ ಬಗ್ಗೆ ಮಾತನಾಡಲು ಯೋಚಿಸಬೇಕಾದ ಪರಿಸ್ಥಿತಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಂದಿದೆ. ಹೀಗಾಗಿ ಹಿಂದಿನಂತೆ ಎಲ್ಲಾ ಪದ್ಧತಿ ಮುಂದುವರಿಯಲಿ ಅಂತ ಒತ್ತಾಯ ಮಾಡ್ತಾ ಇದ್ದಾರೆ.
ಒಂದು ಕಡೆ ಕಮ್ಯುನಲ್ ವಿವಾದಗಳು ಭುಗಿಲೇಳುತ್ತಿವೆ. ಇದರಿಂದಾಗಿ ಸರ್ಕಾರದ ವಿರುದ್ಧ ಬೆಲೆ ಏರಿಕೆ ಸೇರಿ ಅನೇಕ ವಿಚಾರವಾಗಿ ಧ್ವನಿ ಎತ್ತಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಹೀಗಾಗಿ ಮೊನ್ನೆ ರಾಜ್ಯಕ್ಕೆ ಬಂದಿದ್ದ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿ ಹೋಗಿದ್ದಾರೆ. ಆಡಳಿತ ಪಕ್ಷ ಎಷ್ಟೇ ವಿವಾದ ಮಾಡಲಿ, ನೀವು ಎದೆಗುಂದಬೇಡಿ. ಜನರ ಜಲ್ವಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ನಿರಂತರ ಹೋರಾಟ ಮಾಡಿ. ಕೊವಿಡ್ ಬಳಿಕ ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಬೂತ್ ಮಟ್ಟದಿಂದ ರಾಜ್ಯದಲ್ಲಿರುವ ನಿರುದ್ಯೋಗಿಗಳ ಪಟ್ಟಿ ಮಾಡಿ ಅಂತ ಯೂತ್ ಕಾಂಗ್ರೆಸ್‌ಗೆ ಟಾಸ್ಕ್ ಕೊಟ್ಟಿದ್ರು. ಪಟ್ಟಿ ಸಿದ್ದವಾದ ಬಳಿಕ ನಿರುದ್ಯೋಗಿಗಳನ್ನು ಒಗ್ಗೂಡಿಸಿ ಸ್ಥಳೀಯ ಮಟ್ಟದಲ್ಲಿ ಸಮಾವೇಶ ಪ್ರತಿಭಟನೆ ಮಾಡಿ. ಆ ಮೇಲೆ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಿ. ಈ ಮೂಲಕ ಬಿಜೆಪಿ ಅಸ್ತ್ರಗಳಿಗೆ ಪ್ರತ್ಯಸ್ತ್ರ ರೂಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಅಂತ ಸೂಚನೆ ನೀಡಿದ್ರು.
ಅಲ್ಲದೇ ಸರ್ಕಾರದ ಭ್ರಷ್ಟಾಚಾರದ ವಿಚಾರ ನಿಮ್ಮ ಪ್ರಚಾರದ ಪ್ರಮುಖ ಸರಕಾಗಲಿ. ಗುತ್ತಿಗೆದಾರರು ಎತ್ತಿರುವ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಇಲ್ಲಿಗೆ ಬಿಡಬೇಡಿ. ಇದನ್ನ ಸಾಮಾನ್ಯ ಜನರವರೆಗೂ ತಲುಪುವವರೆಗೂ ಪ್ರಚಾರ ಮಾಡಿ ಎಂದು ರಾಹುಲ್ ಗಾಂಧಿ ಕೈ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿಯ ಕಮ್ಯುನಲ್ ವಿಚಾರಗಳಿಂದ ಕಾಂಗ್ರೆಸ್ ಚಿಂತೆಗೀಡಾಗಿದೆ. ಹೀಗಾಗಿ ಬೇರೆ ಮಾರ್ಗಗಳ ಮೂಲಕ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಸಿದ್ಧತೆ ನಡೆಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಫಲ ಕೊಡುತ್ತೆ ಕಾದು ನೋಡಬೇಕು.