ಬೆಳಗಾವಿ: ಬಿಜೆಪಿಯ ಅಜೆಂಡಾಗಳ ಬಗ್ಗೆ ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದು ಹೇಳಿಕೆ ನೀಡಿದ್ದಾರೆ. ಹಿಂದೂ ಉತ್ಸವ, ಜಾತ್ರೆಗಳಿಗೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿಧಿಸಿರುವ ವಿಚಾರದ ಬಗ್ಗೆ ಹೇಳಿದ ಸತೀಶ್ ಬಿಜೆಪಿಯವರು ಹಿಡನ್ ಅಜೆಂಡಾ ಒಂದೊಂದೇ ಜಾರಿಗೆ ತರಲು ಪ್ರಯತ್ನ ಮಾಡ್ತಿದ್ದಾರೆ ಎಂದರು.
“ಕಾನೂನು ಇರಬಹುದು, ಎಲ್ಲೋ ಒಂದೆಡೆ ಸರ್ಕ್ಯೂಲರ್ ಇರಬಹುದು. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದೆ. ಎಲ್ಲ ಧರ್ಮದವರು ಒಟ್ಟಾಗಿ ಕೆಲಸ ಮಾಡ್ತಾರೆ, ವ್ಯಾಪಾರ ಮಾಡ್ತಾರೆ. ಹಿಂದೆ ಬಿಜೆಪಿಯವರು 7 ವರ್ಷಗಳಲ್ಲಿ ಸಾಕಷ್ಟು ಕಾನೂನು ತಂದ್ರು. ಆರು ತಿಂಗಳವರೆಗೆ ಅದನ್ನ ವ್ಯಾಕ್ಯುಮ್ ಇಡ್ತಾರೆ ಅಷ್ಟೇ, ಮತ್ತೆ ಯಥಾಸ್ಥಿತಿ ಇರುತ್ತೆ. ದೇಶದಲ್ಲಿ ಏನೂ ಬದಲಾವಣೆ ಮಾಡಲು ಸಾಧ್ಯವಿಲ್ಲ, ಎಲ್ಲರೂ ಕೂಡಿ ಇರೋ ದೇಶ ಇದು” ಎಂದು ಬಿಜೆಪಿಯನ್ನು ಕುಟುಕಿದರು.
“ಇಷ್ಟೆಲ್ಲಾ ಜಾತಿ ಧರ್ಮ ಕೂಡಿ ಇರುವಂತಹ ವ್ಯವಸ್ಥೆ ಇದು. ಅವರೇನೇ ಹೇಳಿದರೂ ಬದಲಾವಣೆ ಮಾಡಲಾಗಲ್ಲ. ಎಲ್ಲಾ ಯಥಾಸ್ಥಿತಿಯಾಗಿ ನಡೆಯುತ್ತೆ ಅಷ್ಟೇ. ಎರಡು ತಿಂಗಳಲ್ಲಿ ಶಿವಮೊಗ್ಗ ಘಟನೆ ಆಯ್ತು, ಹಿಜಾಬ್ ಆಯ್ತು, ಕೇಸರಿ ಶಾಲು ಆಯ್ತು
ಈಗ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಮುಸ್ಲಿಂರು ವ್ಯಾಪಾರ ಮಾಡಬಾರದು ಅಂತಾ ಹೊಸದು ಮಾಡ್ತಿದ್ದಾರೆ. ಇದನ್ನೆಲ್ಲಾ ಅಷ್ಟು ಸುಲಭವಾಗಿ ಮಾಡೋಕೆ ಸಾಧ್ಯವಿಲ್ಲ. ಅವರೇನೇ ಹೇಳಿದರೂ ಜನ ಒಪ್ಪಲ್ಲ, ಎಲ್ಲರೂ ಕೂಡಿಯೇ ಇರ್ತಾರೆ. ಅವರವರಲ್ಲಿ ಸಂಬಂಧಗಳು ಇರ್ತಾವೆ, ವ್ಯಾಪಾರದಲ್ಲಿ ಮುಸ್ಲಿಂ ಹಿಂದೂ ಅನ್ನೋದು ಬರಲ್ಲ” ಎಂದು ಬಿಜೆಪಿ ಹೇಗೆ ತನ್ನ ಅಜೆಂಡಾದಿಂದ ಜನರ ನಡುವೆ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ಬಿಡಿಸಿ ಹೇಳಿದರು.
“ದಿ ಕಾಶ್ಮೀರ ಫೈಲ್ಸ್ ಸಿನಿಮಾ. ಅದು ಬಿಜೆಪಿಯವರ ಹಿಡನ್ ಅಜೆಂಡಾದ ಒಂದು ಪಾರ್ಟ್ ಅಷ್ಟೆ. ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನೂ ಸಾಕಷ್ಟು ಘಟನೆಗಳು ನಡೆಯುತ್ತೆ. ಅದಕ್ಕೆ ನಾವು ಪ್ರಿಪೇರ್ ಆಗಿ ಇರಬೇಕು ಅಷ್ಟೇ. ಏನಾದರೂ ಇಂದು ಇಶ್ಯೂ ಮಾಡಿಯೇ ಮಾಡ್ತಾರೆ, ಅದಕ್ಕೆ ನಾವು ಪ್ರಿಪೇರ್ ಆಗಿರಬೇಕು” ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನೀಡಿದರು.