ಬೆಂಗಳೂರು: ಇಂದು ವಿಧಾನ ಪರಿಷತ್ನಲ್ಲಿ ಸೆಂಚುರಿ ಕ್ಲಬ್ ವಿಷಯವಾಗಿ ನಡೆದ ಚರ್ಚೆ ಗಮನ ಸೆಳೆಯಿತು. ಸೆಂಚುರಿ ಕ್ಲಬ್ ಬಗ್ಗೆ ತೇಜಸ್ವಿನಿ ಗೌಡ ಪ್ರಶ್ನೆಯೊಂದನ್ನು ಕೇಳಿದ್ದರು.
“ಸರ್ ಎಂ ವಿಶ್ವೇಶ್ವರಯ್ಯ ಅವ್ರು ಮೊದಲು ಕ್ಲಬ್ ಅಧ್ಯಕ್ಷರಾಗಿದ್ದರು. ಒಂದು ದೇಶಿಯವಾದ ಕ್ಲಬ್ ಇರಲಿ ಅಂತ ಮೈಸೂರಿನ ದಿವಾನರು ರಾಜರ ಅನುಮತಿ ಮೇರೆಗೆ ಈ ಕ್ಲಬ್ಬನ್ನು ಆರಂಭಿಸಿದರು. ಕಬ್ಬನ್ ಪಾರ್ಕ್ ಒಳಗಡೆ ಈ ಸೆಂಚುರಿ ಕ್ಲಬ್ ಇದೆ. ಹೀಗಾಗಿ ಕ್ಲಬ್ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕ್ಲಬ್ ಪಾರ್ಕ್ ಜೋನ್ ವಲಯದಿಂದ ಕೈಬಿಡಬೇಕು. ಸುಂದರವಾದ ಮೈಸೂರು ವಾಸ್ತುಶಿಲ್ಪದ ಪ್ರಕಾರ ನಿರ್ಮಿಸೋದಕ್ಕೆ ಅವಕಾಶ ನೀಡಬೇಕು” ಎಂದು ತೇಜಸ್ವಿನಿ ಸರ್ಕಾರಕ್ಕೆ ವಿನಂತಿ ಮಾಡಿದರು.
ಅದಕ್ಕೆ ಉತ್ತರವಾಗಿ ತೋಟಗಾರಿಕಾ ಸಚಿವ ಮುನಿರತ್ನ ಉತ್ತರ ನೀಡುತ್ತಾ “ಸೆಂಚುರಿ ಕ್ಲಬ್ ಸೇರಿ ಹಲವು ಕಟ್ಟಡಗಳು ಕಬ್ಬನ್ ಪಾರ್ಕ್ ವ್ಯಾಪ್ತಿಗೆ ಬರುತ್ತವೆ. ಈ ಕಟ್ಟಡಗಳು ಹಳೆಯ ಪಾರಂಪರಿಕ ಕಟ್ಟಡಗಳಾಗಿವೆ. ಆದ್ದರಿಂದ ಅವುಗಳನ್ನು ಹೀಗೆಯೇ ಉಳಿಸಿಕೊಂಡು ಹೋಗಬೇಕು. ಪಾರ್ಕ್ ವ್ಯಾಪ್ತಿಯಿಂದ ಕೈಬಿಟ್ಟರೆ ಕಟ್ಟಡ ಕೆಡವಲಾಗುತ್ತದೆ. ಪಾರಂಪರಿಕ ಕಟ್ಟಡವನ್ನು ಉಳಿಸಿಕೊಂಡು ಹೋಗುತ್ತೇವೆ. ಪಾರ್ಕ್ ಜೋನಿನಿಂದ ಸೆಂಚುರಿ ಕ್ಲಬ್ ಕೈಬಿಡುವ ಪ್ರಶ್ನೆಯೇ ಇಲ್ಲ” ಎಂದರು.
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ತೇಜಸ್ವಿನಿ ಇಲ್ಲಿ ಪಾರಂಪರಿಕ ಕಟ್ಟಡ ಇಲ್ಲ ಎಂದರು. ಒಬ್ಬರು ಪಾರಂಪರಿಕ ಕಟ್ಟಡ ಅಂತೀರಿ, ಒಬ್ಬರು ಅಲ್ಲ ಅಂತೀರಿ, ಯಾವುದು ಸತ್ಯ ಅನ್ನೋದನ್ನು ಇಬ್ಬರೂ ಹೋಗಿ ನೋಡಿಕೊಂಡು ಬನ್ನಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಅದಕ್ಕೆ ನಾವು ಅಲ್ಲಿಗೆ ಹೋಗಿ ಭೇಟಿ ನೀಡಿ ಬಂದು ಹೇಳುತ್ತೇವೆ ಎಂದು ಮುನಿರತ್ನ ಹೇಳಿದಾಗ ಈ ಚರ್ಚೆಗೆ ವಿರಾಮ ದೊರಕಿತು.
ಸೆಂಚೂರಿ ಕ್ಲಬ್ ಪಾರಂಪರಿಕ ಕಟ್ಟಡವೇ ಅಲ್ಲವೆ ಎಂಬುದನ್ನು ನಿರ್ಧರಿಸಲು ಅಲ್ಲಿಗೆ ಹೋಗಿ ನೋಡುವ ಅವಶ್ಯಕತೆಯೇ ಇಲ್ಲ ಎಂಬುದು ಸದನದಲ್ಲಿರುವವರಿಗೆ ಗೊತ್ತಾಗಲಿಲ್ಲವೆಂಬುದೇ ಅಚ್ಚರಿಯ ವಿಷಯ. ಏಕೆಂದರೆ ನಮ್ಮ ಕನ್ನಡ ನಾಡಿನ ಹೆಮ್ಮೆಯ ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಥಮ ಬಾರಿಗೆ ಅಧ್ಯಕ್ಷರಾದಾಗಲೇ ಈ ಸೆಂಚೂರಿ ಕ್ಲಬ್ ಕಟ್ಟಡಕ್ಕೆ ಪಾರಂಪರಿಕ ಕಟ್ಟಡದ ಸ್ಥಾನಮಾನ ದೊರಕಿದಂತಾಯಿತು. ಹೀಗಾಗಿ ಇದರ ತೀರ್ಮಾನವನ್ನು ಸದನದಲ್ಲೇ ಮಾಡಬಹುದಾಗಿತ್ತೇ ಹೊರತು, ಹೋಗಿ ನೋಡಿ ನಂತರ ಹೇಳುತ್ತೇವೆ ಎಂಬ ಉತ್ತರ ನಿರಾಶೆ ಹುಟ್ಟಿಸುತ್ತದೆ.
ಓಂಪ್ರಕಾಶ್ ನಾಯಕ್, ಪವರ್ ಟಿವಿ