ಮೇಕೆದಾಟು, ಮಹದಾಯಿ ಸೇರಿದಂತೆ ಅಂತಾರಾಜ್ಯ ಜಲ ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಸರ್ವ ಪಕ್ಷಗಳ ಸಭೆ ನಡೆಯಿತು. ಮಹತ್ವದ ಸರ್ವಪಕ್ಷ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಮಾಧುಸ್ವಾಮಿ, ಗೋವಿಂದ್ ಕಾರಜೋಳ, ಕಾಂಗ್ರೆಸ್ನ ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್, ಹೆಚ್.ಕೆ ಪಾಟೀಲ್, ಜೆಡಿಎಸ್ನ ಬಂಡೆಪ್ಪ ಕಾಶಂಪುರ್, ಶ್ರೀಕಂಠೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ತಮಿಳುನಾಡು ವಿರೋಧಕ್ಕೆ ಕ್ಯಾರೆ ಮಾಡದಿರಲು ಸರ್ವ ಸಭೆಯಲ್ಲಿ ಸಹಮತ ವ್ಯಕ್ತವಾಗಿದ್ದು. ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯವಾಗಿದೆ. ಕಾವೇರಿ ನೀರು ಹಂಚಿಕೆಯಾಗಿರುವಾಗ ಮೇಕೆದಾಟು ಯೋಜನೆ ಜಾರಿ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸಭೆಯಲ್ಲಿ ಕಾನೂನು ತಜ್ಞರು ಸಹಮತ ವ್ಯಕ್ತಪಡಿಸಿದರು. ನದಿ ಜೋಡಣೆಯಿಂದ ರಾಜ್ಯಕ್ಕೆ ನಷ್ಟವಾಗಲಿದೆ ಎಂದಿರುವ ವಿಪಕ್ಷ ನಾಯಕರು, ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸದೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು. ಕರ್ನಾಟಕಕ್ಕೆ ಸಿಗಬೇಕಾಗಿರುವ ನೀರಿನ ಪಾಲು ಸಿಗಲೇಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆ ಇಲ್ಲ ಎಂದು ಸಭೆಯಲ್ಲಿ ಕರ್ನಾಟಕ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಿತು.