ದಿ ಕಾಶ್ಮೀರಿ ಫೈಲ್ ಸಿನಿಮಾ ವೀಕ್ಷಣೆಗೆ ಶಾಸಕರನ್ನು ಆಹ್ವಾನಿಸಿ ಸಭಾಪತಿ ಹೊರಟ್ಟಿಯವರು ಪರಿಷತ್ನಲ್ಲಿ ಪ್ರಕಟಣೆ ಕೊಟ್ಟ ವಿಚಾರವಾಗಿ ಕಾಂಗ್ರೆಸ್ ಸದಸ್ಯರು ಗಲಾಟೆ ಮಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ವಿಚಾರ ವಾಪಸ್ ಪಡೆಯುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಇದಿಷ್ಟೇ ಅಲ್ಲದೆ ಕಾಂಗ್ರೆಸ್ನ ಹರಿಪ್ರಸಾದ್ ಫರ್ಜಾನಾ ಮತ್ತು ವಾಟರ್ ಅಂತ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದು ಸಭಾಪತಿಯವರಿಗೆ ಕುಟುಕಿದರು.
“ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸುವುದಕ್ಕೆ ಹೊರಟಿದ್ದೀರಾ? ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು?” ಎಂದು ಸಲೀಂ ಅಹಮದ್ ಪ್ರಶ್ನಿಸಿದರು. ಅದಕ್ಕೆ ಸೋಮಶೇಖರ್ ಹಿಜಾಬ್ ಯಾರಿಗೂ ಕಡ್ಡಾಯವಿಲ್ಲ, ಇಷ್ಟ ಇದ್ರೆ ನೋಡಿ ಅಷ್ಟೆ ಎಂದರು.
ಬಿಜೆಪಿಯ ಧೋರಣೆಯನ್ನು ಖಂಡಿಸಿದ ಕಾಂಗ್ರೆಸ್ ಬಾಬೂ ಭಜರಂಗಿ ಅಂತ ಸಿನಿಮಾ ತೋರಿಸಿ, ಈ ರೀತಿಯಲ್ಲಿ ನೀವು ಎಲ್ಲೆಡೆ ದ್ವೇಷ ಭಾವನೆ ಹರಡುತ್ತಿದ್ದೀರ, ಇದು ನಮಗೂ ಗೊತ್ತಿದೆ. ತೋರಿಸುವುದಿದ್ದರೆ ಗುಜರಾತ್ ಫೈಲೂ ತೋರಿಸಲಿ ಎಂದು ಕಾಶ್ಮೀರ್ ಫೈಲ್ ಸಿನಿಮಾ ತೋರಿಸುತ್ತಿರುವುದಕ್ಕೆ ಟೀಕಿಸಿದರು.
ಪಂಚರಾಜ್ಯ ಚುನಾವಣೆ ಏನಾಯ್ತು ಅಂತ ಗೊತ್ತಿದೆ. ಬಿಜೆಪಿಯವರು ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತಂತೆ ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಪರಿಷತ್ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು. ಇದನ್ನು ಖಂಡಿಸಿ ಬಿಜೆಪಿ ಸದಸ್ಯರು ಸಹ ನಿಮ್ಮ ಆರ್ಭಟ ನಡೆಯೋದಿಲ್ಲ ಎಂದು ಗದ್ದಲ ಎಬ್ಬಿಸಿದರು.