ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ 17ನೇ ದಿನವಾದ ಇಂದೂ ಸಹ ಎರಡೂ ದೇಶಗಳ ನಡುವೆ ಘನಘೋರ ಕದನ ಮುಂದುವರೆದಿದೆ. ಎರಡೂ ದೇಶಗಳು ಪಟ್ಟು ಬಿಡದೆ ಹೋರಾಟ ಮುಂದುವರೆಸಿವೆ. ರಷ್ಯಾ ಸಂಪೂರ್ಣವಾಗಿ ಉಕ್ರೇನ್ ಮೇಲೆ ಯುದ್ಧ ಗೆಲ್ಲುವವರೆಗೂ ಹೋರಾಟ ಮುಂದುವರೆಸುವ ಸೂಚನೆ ನೀಡಿದ್ದರೆ, ಉಕ್ರೇನ್ ಏನೇ ಆಗಲಿ ರಷ್ಯಾ ತಾನಾಗೇ ಯುದ್ಧ ನಿಲ್ಲಿಸಿ ಹಿಂದಿರಗುವವರೆಗೂ ತಾನು ತನ್ನ ರಾಜಧಾನಿ ಹಾಗೂ ಇತರೇ ನಗರಗಳನ್ನುಕಾಪಾಡಿಕೊಳ್ಳಲು ಟೊಂಕಕಟ್ಟಿ ನಿಂತಿದೆ. ಯುದ್ಧವನ್ನು ಗೆಲ್ಲುವುದು ತಡವಾದಂತೆಲ್ಲ ಒತ್ತಡಕ್ಕೆ ಸಿಕ್ಕ ರಷ್ಯಾ ಉಕ್ರೇನ್ ನಗರಗಳ ಮೇಲೆ ನಾಗರಿಕರ ಮೇಲೆ ಬಾಂಬ್ ದಾಳಿ ಮಾಡಿ ತನ್ನ ಅಸಹನೆ ಪ್ರದರ್ಶಿಸುತ್ತಿದೆ.
ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಮತ್ತೊಂದು ಯುದ್ಧ ತಂತ್ರವನ್ನು ಬಳಸಲು ಹೊರಟಿದ್ದಾರೆ. ರಷ್ಯಾ ಪಕ್ಕದ ದೇಶಗಳ ಯಾರೇ ಆದರೂ ರಷ್ಯಾ ಸೈನ್ಯವನ್ನು ಸೇರಬಹುದು ಹಾಗೂ ಉಕ್ರೇನ್ ವಿರುದ್ಧ ಹೋರಾಡಬಹುದು ಎಂದು ಕರೆನೀಡಿದ್ದಾರೆ. ಇತ್ತ ಉಕ್ರೇನ್ ಅಧ್ಯಕ್ಷನನ್ನು ಅಮೆರಿಕಾ ಸೇರಿದಂತೆ ಇತರೇ ನ್ಯಾಟೊ ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನು ಕೊಡುವ ಮೂಲಕ ಬೆಂಬಲಿಸುತ್ತಲೇ ಇದ್ದಾರೆ. ಅಮೆರಿಕಾ ಹೊಸ ಯುದ್ಧ ಉಪಕರಣಗಳನ್ನು ಉಕ್ರೇನ್ಗೆ ರವಾನಿಸುತ್ತಿದೆ. ಹೆಗಲ ಮೇಲೆ ಹೊತ್ತು ಹಾರಿಸಬಲ್ಲ ಚಿಕ್ಕ ಕ್ಷಿಪಣಿಗಳನ್ನು ಅಮೆರಿಕಾ ಕಳುಹಿಸುತ್ತಿದೆ. ಇದರಿಂದ ಯುದ್ಧ ವಿಮಾನಗಳನ್ನೂ ಸಹ ಹೊಡೆದುರುಳಿಸಬಹುದು ಎನ್ನಲಾಗಿದೆ.