ಪಂಚ ರಾಜ್ಯ ಎಲೆಕ್ಷನ್‌ನಿಂದ ಬಿಜೆಪಿಗೆ ಹುಮ್ಮಸ್ಸು, ಕಾಂಗ್ರೆಸ್‌ಗೆ ಪಾಠ..!; ಮತ್ತೆ ಮುನ್ನೆಲೆಗೆ ಬಂದ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರ
ಐದು ರಾಜ್ಯಗಳ ಚುನಾವಣೆ ಫಲಿತಾಂಶವು ಬಿಜೆಪಿಗೆ ಹೊಸ ಹುಮ್ಮಸ್ಸು ಕೊಟ್ಟಿದ್ರೆ, ಕಾಂಗ್ರೆಸ್‌ಗೆ ಟೆನ್ಷನ್ ಶುರುವಾಗಿದೆ.. ಮುಂದಿನ ಚುನಾವಣೆ ಎದುರಿಸಲು ಪ್ರಬಲ ನಾಯಕತ್ವವಿಲ್ಲದೆ ಸೊರಗಿದೆ.. ಈಗಾಗಲೇ ಹಲವು ರಾಜ್ಯಗಳನ್ನು ಕೈ ಚೆಲ್ಲಿ ಕೂತಿರುವ ಕಾಂಗ್ರೆಸ್ ರಾಜಸ್ತಾನ, ಚತ್ತೀಸ್‌ಘಡದಲ್ಲಿ ಮಾತ್ರ ಸ್ವತಂತ್ರ್ಯವಾಗಿ ಗೆದ್ದಿದೆ. ಇನ್ನುಳಿದ, ಮಹಾರಾಷ್ಟ್ರ, ಜಾರ್ಖಾಂಡ್‌ನಲ್ಲಿ ಮೈತ್ರಿ ಸರ್ಕಾರ ಇದೆ. ಇದೀಗ ಪಂಜಾಬ್ ಕೂಡ ಕಳೆದುಕೊಂಡಿದ್ದು, ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ ಕಾಂಗ್ರೆಸ್ ಪಕ್ಷ.
ಇನ್ನು, ಕರ್ನಾಟಕದ ವಿಚಾರಕ್ಕೆ ಬಂದ್ರೆ, ಬಿಜೆಪಿಗೆ ಈ ಗೆಲುವಿನಿಂದ ಹುಮ್ಮಸ್ಸು ಬಂದಿದ್ದು, ಮುಂಬರುವ ಚುನಾವಣೆಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ. ಆದ್ರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರಿದ್ರೂ, ಒಗ್ಗಟ್ಟಿನ ಕೊರತೆ ಎದ್ದು ಕಾಣ್ತಿದೆ. ಇನ್ನೂ ಕೇಂದ್ರದಲ್ಲಿ ದಕ್ಷ ನಾಯಕತ್ವದ ಕೊರತೆ ಎದ್ದು ಕಾಣ್ತಿದೆ.. ಹೀಗಾಗಿ, ರಾಷ್ಟ್ರಮಟ್ಟದ ನಾಯಕತ್ವ ಯಾರ ಹೆಗಲಿಗೆ ಅನ್ನೋ ಪ್ರಶ್ನೆ ಎದ್ದಿದೆ.. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಬಿಟ್ಟು ಬೇರೆ ಯಾರಿಗೆ ಹೊಣೆಗಾರಿಕೆ ನೀಡಲಾಗುತ್ತೆ ಅನ್ನೋ ಪ್ರಶ್ನೆ ಕೂಡ ಇದೆ..
ಮುಂದಿನ ಕಾರ್ಯತಂತ್ರ ಹೇಗಿರಬೇಕೆಂಬ ಗೊಂದಲ; ಕಾಂಗ್ರೆಸ್‌ನಲ್ಲಿರುವ ಒಳಜಗಳಕ್ಕೆ ತೇಪೆ ಹಚ್ಚುವ ಕೆಲಸ
ಮುಂದಿನ ಕಾರ್ಯತಂತ್ರ ಹೇಗಿರಬೇಕು ಎಂದು ಗೊಂದಲದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರಿಗೆ ಈ ಫಲಿತಾಂಶ ದೊಡ್ಡ ಪಾಠವಾಗಿದೆ. ಚುನಾವಣೆ ಹೊತ್ತಿಗೆ ಏನೆಲ್ಲಾ ಕಸರತ್ತು ಮಾಡಿದರೂ ಪಂಜಾಬಿನಲ್ಲಿ ಕಾಂಗ್ರೆಸ್ ಮಲಗಿಯೇ ಬಿಟ್ಟಿದೆ. ಅಲ್ಲಿನ ನಾಯಕರ ಒಳಜಗಳ ಹಾಗೂ ಬಹಿರಂಗ ಕುಟುಕು ಮಾತುಗಳು ಪಕ್ಷವನ್ನು ನೆಲಕಚ್ಚಿಸಿದವು. ಉತ್ತರಾಖಂಡ್, ಗೋವಾದಲ್ಲಿ ಅವಕಾಶ ಇದ್ದರೂ ಅದನ್ನು ಅನುಕೂಲಕಾರಿಯಾಗಿಸುವಲ್ಲಿ ಯಶ ಕಾಣಲಿಲ್ಲ. ಉತ್ತರ ಪ್ರದೇಶದಲ್ಲಂತೂ ಹೀನಾಯ ಸೋಲೇ ಕಂಡಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಉಮೇದಿನಲ್ಲಿರುವ ಕಾಂಗ್ರೆಸ್ ನಾಯಕರು ಒಳಜಗಳ, ಪರಸ್ಪರ ಕಾಲೆಳೆಯುವ ರಾಜಕಾರಣವನ್ನೇ ಬಿಟ್ಟಿಲ್ಲ.
ಕಾಂಗ್ರೆಸ್ ಬಯಸಿದರೆ ನಾವೆಲ್ಲರೂ ಒಟ್ಟಾಗಿ ಹೋರಾಡಬಹುದು;2024ರ ಸಾರ್ವತ್ರಿಕ ಚುನಾವಣೆಗೆ ಹೋರಾಡಲು ಮಮತಾ ಕರೆ
ಕಾಂಗ್ರೆಸ್ ಬಯಸಿದರೆ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಾಂಗ್ರೆಸ್ ಬಯಸಿದರೆ ನಾವೆಲ್ಲರೂ ಒಟ್ಟಾಗಿ 2024 ಸಾರ್ವತ್ರಿಕ ಚುನಾವಣೆಯಲ್ಲಿ ಹೋರಾಡಬಹುದು. ಉತ್ತರ ಪ್ರದೇಶದಲ್ಲಿ ಮತಯಂತ್ರಗಳ ಅಕ್ರಮ ನಡೆದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹತಾಶರಾಗಬಾರದು. ಇವಿಎಂಗಳ ಫೋರೆನ್ಸಿಕ್ ಪರೀಕ್ಷೆಗೆ ಅವರು ಆಗ್ರಹಿಸಬಹುದು. ಈ ಬಾರಿ ಅಖಿಲೇಶ್ ಯಾದವ್ ಅವರ ಮತ ಶೇ. 20 ರಿಂದ 37ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಒಟ್ನಲ್ಲಿ, ಕಾಂಗ್ರೆಸ್ ಅಸ್ಥಿತ್ವದ ಪ್ರಶ್ನೆ ಕಾಡ್ತಿದೆ. ರಾಷ್ಟ್ರೀಯ ಪಕ್ಷವಾಗಿ ಸ್ವತಂತ್ರವಾಗಿ ಯೋಚನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾದೇಶಿಕ ಪಕ್ಷಗಳ ಸಹಕಾರ ಇಲ್ಲದೆ ಬೇರೆ ಏನೂ ಮಾಡಲಾಗದು ಅಂತ ಬಿಜೆಪಿಯೇತರ ಪಕ್ಷಗಳ ಕಡೆ ಮುಖ ಮಾಡಿದೆ. ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡ್ತಿದ್ದಾರೆ..
ಬ್ಯೂರೋ ರಿಪೋರ್ಟ್ ಪವರ್ ಟಿವಿ