ಪಂಜಾಬ್ ರಾಜ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಹೊರಹಾಕಿದ ಕಾಂಗ್ರೆಸ್ನೊಳಗಿನ ಭಿನ್ನಾಭಿಪ್ರಾಯದ ಲಾಭ ಪಡೆದುಕೊಂಡು ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ಪ್ರತಿ ನಾಲ್ಕು ಎಕ್ಸಿಟ್ ಪೋಲ್ಗಳಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಲಿದೆ ಅಂತಾ ಹೇಳಲಾಗುತ್ತಿದೆ. ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ 76-90 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಎಬಿಪಿ ನ್ಯೂಸ್-ಸಿ ವೋಟರ್ 51-61 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ. ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಅವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮತ್ತು ಅಕಾಲಿದಳ ಪಕ್ಷಗಳು ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷದ ಪಟ್ಟಕ್ಕೇರುವ ಅನಿವಾರ್ಯತೆ ಉಂಟಾಗಲಿದೆ.
ಪಂಜಾಬಲ್ಲಿ ಈ ಬಾರಿ ಅಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಅಂತಾ ನಂಬಲಾಗಿತ್ತು. ಆದರೆ ಸರ್ಕಾರವನ್ನ ರಚಿಸಲಿದೆ ಅಂತಾ ಯಾರೂ ಊಹಿಸಿರಲಿಲ್ಲ. ಆದರೆ ಚುನಾವಣೆಯಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿದೆ ಅಂತಾ ಪಂಜಾಬ್ ಜನತೆ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಹಾಗಾಗಿ ಅಧಿಕಾರದ ಆಸೆಯಲ್ಲಿದ್ದ ಕಾಂಗ್ರೆಸ್ಗೆ ಇನ್ನೂ ನಿರಾಸೆ ಉಂಟಾಗಲಿದೆ ಅಂತಾ ಹೇಳಲಾಗುತ್ತಿದೆ. ಇನ್ನು ಅಕಾಲಿದಳ ಪ್ರತೀ ಬಾರಿಯಂತೆ ಉತ್ತಮ ಸಾಧನೆ ಮಾಡಲಿದೆ. ಆದರೆ ಆಪ್ಗೆ ಸ್ಪಷ್ಟ ಬಹುಮತ ಬರದೇ ಹೋದರೆ ಶಿರೋಮಣಿ ಅಕಾಲಿದಳ ಪಂಜಾಬಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಅಂತಾ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಪಂಜಾಬ್ನಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರವೇ ಇದ್ದರೂ ಸಹ ಚುನಾವಣೆವರೆಗೂ ಮುನ್ನ ನಡೆದ ಒಳಜಗಳ, ಕಚ್ಚಾಟಗಳು ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗಿ ಪರಿಣಮಿಸಿವೆ. ಚುನಾವಣೆ ಸಮೀಪವಾಗಿದ್ದಾಗ ಸಿಎಂ ಅಮರಿಂದರ್ ಸಿಂಗ್ರನ್ನ ಕೆಳಗಿಳಿಸಿ ಅವಮಾನ ಮಾಡಿದ್ದು, ನವಜೋತ್ ಸಿಂಗ್ ಹೈಡ್ರಾಮಗಳು ಇವೆಲ್ಲವನ್ನ ನೋಡಿ ಬೇಸತ್ತಿದ್ದ ಜನ ಹೊಸ ಪಕ್ಷ ಆಪ್ಗೆ ಜೈ ಎನ್ನಲು ಸಿದ್ದವಾಗಿದ್ದಾರೆ.