Monday, December 23, 2024

ಪಂಚರಾಜ್ಯ ಚುನಾವಣೆ; ಯಾವ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ?

ಈ ಬಾರಿ ಪಂಚರಾಜ್ಯ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ಸಿಗಲಿದೆ ಅಂತಾ ಎಕ್ಸಿಟ್ ಪೋಲ್​​ಗಳು ಹೇಳಿವೆ. ಆದರೆ ಇದೆಲ್ಲಾ ಸುಳ್ಳು ಲೆಕ್ಕ, ನಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತಾ ಆಯಾಯ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಹಾಗಾದ್ರೆ ಯಾವ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ? ಅತಂತ್ರ ಸ್ಥಿತಿಯಲ್ಲಿ ಅಧಿಕಾರ ಯಾರ ಪಾಲಾಗಲಿದೆ? ಗೋವಾದಲ್ಲಿ ಕಾಂಗ್ರೆಸ್ ರಣತಂತ್ರ ವರ್ಕೌಟ್ ಆಗುತ್ತಾ? ಈ ಎಲ್ಲಾ ವಿಷಯಗಳನ್ನ ಹೇಳ್ತೀವಿ..

ಎಕ್ಸಿಟ್ ಪೋಲ್ ಹೇಳಿದಂತೆ ಬಿಜೆಪಿಗೆ ಅಧಿಕಾರ ಸಿಗುತ್ತಾ?; ಉತ್ತರ ಪ್ರದೇಶದಲ್ಲಿ ನಮ್ಮದೇ ಜಯ ಅಂತಿರೋದೇಕೆ SP?; ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಷ್ಟ ಯಾಕೆ?

ಕಳೆದ ಒಂದು ತಿಂಗಳಲ್ಲಿ ನಡೆದ ಪಂಚರಾಜ್ಯ ಚುನಾವಣೆಯ ಫಲಿತಾಂಶಕ್ಕೆ ಈಗ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಆಯಾ ಪಕ್ಷಗಳು ಮತ ಎಣಿಕೆ ಕೇಂದ್ರಗಳ ಮೇಲೆ ದುರ್ಬೀನು ಇಟ್ಟುಕೊಂಡು ನೋಡ್ತಾ ಕಾಯ್ತಿವೆ. ಮತ ಎಣಿಕೆಗಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲಾ ನಾಯಕರು ಕಾದು ಕುಳಿತಿದ್ದಾರೆ. ಗುರುವಾರ ಬರುವ ಫಲಿತಾಂಶ ಹಲವು ರಾಜಕೀಯ ಪಕ್ಷಗಳ ಭವಿಷ್ಯವನ್ನೇ ಬದಲಾಯಿಸಲಿದೆ. ಹಾಗಾಗಿ ರಾಷ್ಟ್ರೀಯ ಪಕ್ಷಗಳ ಜೊತೆ ಎಲ್ಲಾ ಪಕ್ಷಗಳು ಫಲಿತಾಂಶಕ್ಕಾಗಿ ಆಸೆಗಣ್ಣಿನಿಂದ ಎದುರು ನೋಡುತ್ತಿವೆ. ಸದ್ಯ ಪಂಜಾಬ್ ಮೇಲೆ ಆಸೆ ಬಿಟ್ಟಿರುವ ಬಿಜೆಪಿ ಉಳಿದ ರಾಜ್ಯಗಳ ಫಲಿತಾಂಶದ ಮೇಲೆ ಕಣ್ಣಿಟ್ಟಿದೆ. ಅಲ್ಲದೆ ಎಲ್ಲಾ ಎಕ್ಸಿಟ್ ಪೋಲ್​​ಗಳು ಉತ್ತರ ಪ್ರದೇಶ, ಉತ್ತರಾಖಂಡ್​​​ನಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಸಿಗಲಿದೆ ಅಂತಾ ಹೇಳಿವೆ. ಇದರ ಜೊತೆಗೆ, ಗೋವಾ, ಮಣಿಪುರದಲ್ಲೂ ಜನ ಬಿಜೆಪಿಯನ್ನೇ ಬೆಂಬಲಿಸಿದ್ದಾರೆ ಅಂತಾ ಹೇಳಿವೆ. ಆದರೆ ಇದು ಅಷ್ಟೊಂದು ಸುಲಭ ಅಲ್ಲ ಅನ್ನೋ ಮಾಹಿತಿಯೂ ಇದೆ.

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸ್ಪಷ್ಟ ಬಹುಮತ ಪಡೀತಾರೆ ಮತ್ತೊಮ್ಮೆ ಅಧಿಕಾರ ಹಿಡೀತಾರೆ ಅಂತಾ ಸಮೀಕ್ಷೆಗಳು ಹೇಳಿವೆ. ಆದರೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಿಜೆಪಿಗೆ ತೀವ್ರ ಪೈಪೋಟಿ ನೀಡಲಿದೆ ಅಂತಾ ಚುನಾವಣೆಗೂ ಮುಂಚಿನಿಂದಲೂ ಹೇಳಲಾಗಿತ್ತು. ಹಾಗಾಗಿ ಬಿಜೆಪಿಯೊಂದಿಗೆ ಸಮಾಜವಾದಿ ಪಕ್ಷ ಸಹ ಅತಿಹೆಚ್ಚು ಸ್ಥಾನ ಗೆಲ್ಲುವ ಅಭಿಪ್ರಾಯಗಳನ್ನ ತಳ್ಳಿ ಹಾಕುವಂತಿಲ್ಲ. ಅಲ್ಲದೆ ಯುಪಿಯಲ್ಲಿ ಬಿಜೆಪಿ ವಿರುದ್ಧದ ಅಲೆ ಇದೆ. ಸರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗಿಲ್ಲ ಅನ್ನೋ ಮಾತುಗಳು ಸಹ ಕೇಳಿ ಬಂದಿದ್ವು. ಇದೆಲ್ಲದರಿಂದ ಈ ಬಾರಿ ಆಡಳಿತ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲ್ಲ ಅನ್ನೋ ಮಾತಿದೆ. ಆದರೆ ಸ್ಪಷ್ಟ ಬಹುಮತ ಸಿಗದೇ ಇದ್ರೂ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಆದರೆ ಎಸ್ಪಿ ಸಹ ಬಿಜೆಪಿಗೆ ಪೈಪೋಟಿ ನೀಡಲಿದ್ದು, ಇದಕ್ಕೆ ಬಿಎಸ್ಪಿ, ಕಾಂಗ್ರೆಸ್ ಜೊತೆಯಾದ್ರೆ ಸಮಾಜವಾದಿ ಪಕ್ಷಕ್ಕೂ ಅಧಿಕಾರ ಪಡೆಯುವ ಚಾನ್ಸ್ ಸಿಗಬಹುದು. ಆದರೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಇದ್ದಾಗ ಮಾತ್ರ ಇದೆಲ್ಲಾ ಸಾಧ್ಯವಾಗಲಿದೆ. ಇದರ ಜೊತೆಗೆ ಉತ್ತರಾಖಂಡದಲ್ಲೂ ಈ ಬಾರಿ ಕಾಂಗ್ರೆಸ್ ಮೋಡಿ ಮಾಡಲಿದ್ದು, ಬಿಜೆಪಿ ಅಧಿಕಾರಕ್ಕೆ ತೊಡಕಾಗಲಿದೆ ಅನ್ನೋದನ್ನ ಕೆಲ ಸಮೀಕ್ಷೆಗಳು ಹೇಳಿವೆ.

ಕುತೂಹಲ ಕೆರಳಿಸಿದೆ ಗೋವಾ ಚುನಾವಣಾ ಫಲಿತಾಂಶ; ಗೋವಾದಲ್ಲಿ ‘ಕೈ’ಗೆ ಪಟ್ಟ ಕಟ್ತಾರಾ ಟ್ರಬಲ್​ ಶೂಟರ್​?

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಮುಂಚೆಯೇ ಹಲವು ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಪೈಕಿ, ಗೋವಾ ಚುನಾವಣೆ ಫಲಿತಾಂಶದ ಹಿನ್ನೆಲೆ ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ. ಸಮೀಕ್ಷೆಗಳಲ್ಲಿ ಈಗಾಗಲೇ ಇಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೋವಾಗೆ ತೆರಳಿದ್ದಾರೆ. ಎಐಸಿಸಿ ಸೂಚನೆ ಮೇರೆಗೆ ಡಿ.ಕೆ. ಶಿವಕುಮಾರ್ ಗೋವಾಗೆ ತೆರಳಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಶಾಸಕರು ಕೈ ತಪ್ಪದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಗೋವಾದಲ್ಲಿ ಗೆಲ್ಲಬಹುದಾದ ನೂತನ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ಗೆ ವಹಿಸಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ.

ಗೋವಾದಲ್ಲಿ ಕಾಂಗ್ರೆಸ್ ತನ್ನ ಸಂಭಾವ್ಯ ಶಾಸಕರನ್ನ ರೆಸಾರ್ಟ್​ಗೆ ಸ್ಥಳಾಂತರಿಸಿದ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷವೂ ತನ್ನ ಅಭ್ಯರ್ಥಿಗಳನ್ನು ಕಾವಲು ಕಾಯಲು ಮುಂದಾಗಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಒಟ್ಟುಗೂಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗೋವಾದಲ್ಲಿ ಅತಂತ್ರ ಅಸೆಂಬ್ಲಿ ಮತ್ತು ಬಿಜೆಪಿಯೊಂದಿಗೆ ಕಾಂಗ್ರೆಸ್​​ ಜಿದ್ದಾಜಿದ್ದಿ ಪೈಪೋಟಿಯ ಭವಿಷ್ಯವಾಣಿಯೊಂದಿಗೆ 2017ರ ಪುನರಾವರ್ತನೆಯನ್ನು ತಪ್ಪಿಸಲು ಎಎಪಿ ಮತ್ತು ಕಾಂಗ್ರೆಸ್ ಎರಡೂ ತಮ್ಮ ಅಭ್ಯರ್ಥಿಗಳಿಗೆ ಕಾವಲಿರಲು ನಿರ್ಧರಿಸಿವೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಉತ್ತರ ಗೋವಾದ ರೆಸಾರ್ಟ್​ಗೆ ಸ್ಥಳಾಂತರಿಸಿದೆ. ಅವರು ಗುರುವಾರದ ಮತ ಎಣಿಕೆ ಮುಗಿದು ಫಲಿತಾಂಶ ಹೊರಬೀಳುವವರೆಗೆ ಅಲ್ಲಿಯೇ ಇರುತ್ತಾರೆ. ಚುನಾವಣೋತ್ತರ ಸಮೀಕ್ಷೆಗಳು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್​ಗೆ ಮೂರು ಸ್ಥಾನಗಳನ್ನು ಭವಿಷ್ಯ ನುಡಿದಿವೆ. ಹಾಗಾಗಿ ಕಾಂಗ್ರೆಸ್ ಟಿಎಂಸಿ ಮತ್ತು ಆಪ್ ಜೊತೆಗೂಡಿ ಗೋವಾದಲ್ಲಿ ಸರ್ಕಾರ ರಚಿಸಲು ತೀರ್ಮಾನಿಸಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳನ್ನೂ ನಡೆಸುತ್ತಿದೆ. ಇದರ ನಡುವೆ ಗೆದ್ದ ಅಭ್ಯರ್ಥಿಗಳು ಬಿಜೆಪಿ ಸೇರಿಕೊಳ್ಳದಂತೆ ತಡೆಯಲು ಆಯಾ ಪಕ್ಷಗಳು ಕಾವಲು ಕಾಯುತ್ತಿವೆ.

ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ತಪ್ಪಲ್ಲ ಹೊಡೆತ; ಅಧಿಕಾರ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣವೇನು?; ಪಂಜಾಬಿಗರ ಮನ ಗೆದ್ದಿದ್ದು ಹೇಗೆ ಅಮ್ ಆದ್ಮಿ ಪಕ್ಷ?

ಈಗಾಗಲೇ ಪಂಜಾಬ್ ವಿಧಾನಸಭಾ ಚುನಾವಣೆ ಮುಗಿದಿದ್ದು, ತೀರ್ಪು ಹೊರಬೀಳಲು ಎರಡೇ ದಿನ ಬಾಕಿ ಇದೆ. ಪಂಜಾಬ್​ನಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿರುವುದರಿಂದ ಆಮ್ ಆದ್ಮಿ ಪಕ್ಷದ ನಾಯಕರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಹಾಗೇ ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳವರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಎರಡು ಎಕ್ಸಿಟ್ ಪೋಲ್​ಗಳನ್ನು ಹೊರತುಪಡಿಸಿ, ಉಳಿದವರೆಲ್ಲರೂ ಈ ಬಾರಿ ಪಂಜಾಬ್​ನಲ್ಲಿ ಆಪ್ ಭಾರೀ ಬಹುಮತವನ್ನು ಪಡೆಯುತ್ತದೆ ಅಥವಾ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಆಮ್ ಆದ್ಮಿ ಪಕ್ಷ ಪಂಜಾಬಲ್ಲಿ ತನ್ನದೇ ಸ್ವಂತ ಬಲದಿಂದ ಅಥವಾ ಇನ್ನೊಂದು ಪಕ್ಷದ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸುವ ಸಾಧ್ಯತೆ ಹೆಚ್ಚಾಗಿದೆ.

ಎಕ್ಸಿಟ್ ಪೋಲ್​ಗಳು ನಿಖರವಾಗಿರಲಿ ಅಥವಾ ಇಲ್ಲದಿರಲಿ ಫೆಬ್ರವರಿ 20ರಂದು ನಡೆದ ಮತದಾನದ ಬಳಿಕ ಬಂದ ಚುನಾವಣೋತ್ತರ ಸಮೀಕ್ಷೆಗಳು ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ. ಅದೇನೇ ಇದ್ದರೂ, ಸಮೀಕ್ಷೆಯ ಪಂಡಿತರು ಎಎಪಿ ಗೆಲುವಿನ ಮುನ್ಸೂಚನೆ ನೀಡಿರುವುದು ಕುತೂಹಲ ಕೆರಳಿಸಿದೆ. ಈ ಬಾರಿ ಒಂದು ಡಜನ್​ಗಿಂತಲೂ ಹೆಚ್ಚು ಎಕ್ಸಿಟ್ ಪೋಲ್​ಗಳು ಬಂದಿವೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ AAPಗೆ ಸ್ಪಷ್ಟ ಬಹುಮತದ ಮುನ್ಸೂಚನೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಸೂಚಿಸುವ ಎಕ್ಸಿಟ್ ಪೋಲ್​ಗಳು ಕಾಂಗ್ರೆಸ್ ಅನ್ನು ಕೇವಲ 10ರಿಂದ 30 ಸ್ಥಾನಗಳಿಗೆ ಸೀಮಿತಗೊಳಿಸಿವೆ. ಕಾಂಗ್ರೆಸ್ ಸೋಲಿಗೆ ನೇರವಾಗಿ ಆಡಳಿತ ವಿರೋಧಿ ಅಲೆ ಕಾರಣವಲ್ಲ, ತೀವ್ರ ಒಳಜಗಳಗಳು ನೇರವಾಗಿ ಕಾರಣ ಅಂತಾ ತಜ್ಞರು ಹೇಳುತ್ತಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ 6 ತಿಂಗಳ ಮೊದಲು ಕಾಂಗ್ರೆಸ್ ಪಕ್ಷ ಸುನಿಲ್ ಜಖಾರ್ ಅವರ ಬದಲಿಗೆ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು. ಚುನಾವಣೆಗೂ 4 ತಿಂಗಳು ಮೊದಲು ಕ್ಯಾಪ್ಟನ್ ಅಮರಿಂದರ್ ಸಿಂಗ್ ಬದಲಿಗೆ ದಲಿತ ನಾಯಕ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಇದರಿಂದ ಅವಮಾನಕ್ಕೊಳಗಾದ ಅಮರಿಂದರ್ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ಅದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ನಂತರ ಚರಣ್ ಜಿತ್ ಸಿಂಗ್ ಚನ್ನಿ ಅವರ ಕುಟುಂಬದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿ ಬಂತು. ಅದರ ಹೊರತಾಗಿಯೂ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಮತ್ತೆ ಖಚಿತಪಡಿಸಲಾಯಿತು. ಇದನ್ನೆಲ್ಲಾ ತಮಗೆ ಅನುಕೂಲವಾಗಿ ಮಾಡಿಕೊಂಡ ಕೇಜ್ರಿವಾಲ್ ಪಂಜಾಬಲ್ಲಿ ಬೀಡು ಬಿಟ್ಟು ಭರ್ಜರಿ ಪ್ರಚಾರ ನಡೆಸಿದ್ರು. ಅಲ್ಲದೆ ದೆಹಲಿಯ ಮಾಡೆಲ್ ಮುಂದಿಟ್ಟು ಪಂಜಾಬ್ ಸಹ ಇದೇ ರೀತಿ ಅಭಿವೃದ್ಧಿಯಾಗಲಿದೆ ಅಂತಾ ಆಶ್ವಾಸನೆಗಳನ್ನ ಕೊಟ್ಟಿದ್ರು. ಇದೆಲ್ಲವೂ ಈಗ ಕಾಂಗ್ರೆಸ್​ಗೆ ಕಂಟಕವಾಗಿ ಅಮ್ ಆದ್ಮಿಗೆ ವರದಾನವಾಗಿ ಪರಿಣಮಿಸುತ್ತಿದೆ.

ರಾಜಧಾನಿ ದೆಹಲಿಯನ್ನೇ ಗೆದ್ದುಕೊಂಡಿರುವ ಸಾಮಾನ್ಯರ ಪಕ್ಷ ಆಪ್ ಈಗ ಪಂಚ ರಾಜ್ಯ ಚುನಾವಣೆಯ ಮೂಲಕ ಸದ್ದಿಲ್ಲದೆ ಬೇರೆ ರಾಜ್ಯಗಳಿಗೂ ಎಂಟ್ರಿ ಕೊಡಲು ಸಿದ್ದವಾಗಿದೆ. ಈಗಾಗಲೇ ಪಂಜಾಬ್​ನಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಮುನ್ಸೂಚನೆ ಸಿಕ್ಕಿದೆ. ಇದರ ಜೊತೆಗೆ ಈಗ ಸ್ಪರ್ಧೆ ಮಾಡಿರುವ 5 ರಾಜ್ಯಗಳಲ್ಲೂ ಆಪ್ ಖಾತೆ ತೆರೆಯಲಿದೆ ಅಥವಾ ಒಳ್ಳೆ ಸಾಧನೆ ಮಾಡಲಿದೆ ಅಂತಾ ಎಕ್ಸಿಟ್ ಪೋಲ್ ಹೇಳಿದೆ. ಅದೇ ನಿಜವಾದರೆ ಮುಂದಿನ ದಿನಗಳಲ್ಲಿ ಅಮ್ ಆದ್ಮಿ ದೇಶದಾದ್ಯಂತ ವಿಸ್ತರಿಸೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಇನ್ನು ಅಮ್ ಆದ್ಮಿ ಒಬ್ಬ ವ್ಯಕ್ತಿಯನ್ನ ಮುಂದಿಟ್ಟುಕೊಂಡು ಈ ಮಟ್ಟಕ್ಕೆ ಬೆಳೆಯಲು ಕಾರಣಗಳೂ ಇಲ್ಲದೇ ಇಲ್ಲ. ಆಪ್ ಬೆಳವಣೆಗೆಯ ವೇಗಕ್ಕೆ ಅದರ ಅಭಿವೃದ್ಧಿಯೇ ಕಾರಣ. ಹೌದು ದೆಹಲಿಯಲ್ಲಿ ಘಟಾನುಘಟಿ ರಾಷ್ಟ್ರೀಯ ಪಕ್ಷಗಳ ನಡುವೆ ಅಧಿಕಾರ ಪಡೆದ ಆಪ್, ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿತ್ತು. ಮುಖ್ಯವಾಗಿ ಅಲ್ಲಿನ ಮೂಲಭೂತ ಸಮಸ್ಯೆಗಳನ್ನ ಇಲ್ಲವಾಗಿಸಿತ್ತು. ಜನರಿಗೆ ಸಮಸ್ಯೆಯಾಗುತ್ತಿದ್ದ ನೀರು, ವಿದ್ಯುತ್ ಸಮಸ್ಯೆಗಳನ್ನ ಪರಿಹರಿಸಿದ್ದಲ್ಲದೆ, ಸರ್ಕಾರಿ ಶಾಲೆ ಆಸ್ಪತ್ರೆಗಳನ್ನ ಅತ್ಯದ್ಭುತವಾಗಿ ಬದಲಾಯಿಸಿತ್ತು. ಇದೆಲ್ಲವನ್ನೂ ಗಮನಿಸುತ್ತಿರುವ ಜನ ನಿಧಾನವಾಗಿ ಬದಲಾವಣೆಯ ಕಡೆ ಹೊರಟಿದ್ದಾರೆ. ಅದನ್ನೇ ಈ ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲೂ ನಾವು ನೋಡಬಹುದಾಗಿದೆ. ಗುರುವಾರ ಹೊರಬೀಳಲಿರುವ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿಯಾದ್ರೂ ಅಚ್ಚರಿಯೇನಿಲ್ಲ.

RELATED ARTICLES

Related Articles

TRENDING ARTICLES