Monday, December 23, 2024

ಮೇಕೆದಾಟು ಪಾದಯಾತ್ರೆ ಕ್ರೆಡಿಟ್ ಪಡೆಯಲು ಡಿಕೆಶಿ ಪ್ರಯತ್ನ..!

ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವಿನ ಕೋಲ್ಡ್ ವಾರ್ ಹೆಚ್ಚಾಗಿದೆ. ಮೇಕೆದಾಟು ಪಾದಯಾತ್ರೆಯ ನಂತ್ರ ಅದು ಮತ್ತಷ್ಟು ಬಿಗಡಾಯಿಸಿದ್ದು, ಇಬ್ಬರ ನಡುವಿನ ಅಂತರ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ ಎನ್ನುವಂತಾಗಿದೆ.

ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಅಸಮಾಧಾನ ಸ್ಪೋಟಗೊಂಡಿತ್ತು. ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗದಷ್ಟು ಕೋಪವಿತ್ತು. ಇದು ಹೈಕಮಾಂಡ್ ಗಮನಕ್ಕೂ ಬಂದಿತ್ತು. ಇದೇ ರೀತಿ ಮುಂದುವರೆದ್ರೆ ಚುನಾವಣೆ ಮೇಲೆ ಎಫೆಕ್ಟ್ ಆಗಲಿದೆ ಎಂಬ ಅರಿವು ಹೈಕಮಾಂಡ್​​ಗಿತ್ತು. ಹಾಗಾಗಿಯೇ ಇಬ್ಬರು ನಾಯಕರ ಜೊತೆ ಉಳಿದ ಹಿರಿಯ ನಾಯಕರನ್ನೂ ರಾಹುಲ್ ದೆಹಲಿಗೆ ಕರೆಸಿಕೊಂಡು ಬುದ್ಧಿವಾದ ಹೇಳಿದ್ದರು. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಎಂದು ಕಿವಿಮಾತು ಹೇಳಿ ಕಳಿಸಿದ್ರು.ಅಲ್ಲಿಂದ ವಾಪಸ್ ಆದ್ಮೇಲೆ ಮೇಕೆದಾಟು ಪಾದಯಾತ್ರೆ ಮತ್ತೆ ಹಮ್ಮಿಕೊಂಡಿದ್ರು. ಇಬ್ಬರು ಒಟ್ಟಾಗಿಯೇ ಪಾದಯಾತ್ರೆಯನ್ನ ಆರಂಭಿಸಿದ್ರು. ಆದ್ರೆ ಪಾದಯಾತ್ರೆ ಮುಗಿಯುವ ಒಳಗಾಗಿ ಇಬ್ಬರ ನಡುವೆ ಬಿರುಕು‌ ಮೂಡಿದೆ. ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕೊತಕೊತ ಅಂತ ಕುದಿಯೋಕೆ ಶುರುಮಾಡಿದ್ದಾರೆ.

ಇತ್ತೀಚೆಗೆ ನಡೆದ ಮೇಕೆದಾಟು ಪಾದಯಾತ್ರೆಯ ಸಂಪೂರ್ಣ ಯಶಸ್ವಿಯಾಗಿದ್ದೇನೋ ನಿಜ. ಆದ್ರೆ ಪಾದಯಾತ್ರೆ ಡಿಕೆಶಿ, ಸಿದ್ದು ನೇತೃತ್ವದಲ್ಲೇ ನಡೆದಿದ್ದು ನಿಜವಾದ್ರೂ ಹಿರಿಯ ನಾಯಕರೂ ಸಾಥ್ ಕೊಟ್ಟಿದ್ರು. ಇದರ ಕ್ರೆಡಿಟ್ ಎಲ್ಲರಿಗೂ‌ ಸಲ್ಲಬೇಕಿತ್ತು. ಆದ್ರೆ ಸಂಪೂರ್ಣ ಕ್ರೆಡಿಟ್ ಪಡೆಯುವ ಪ್ರಯತ್ನ ಡಿಕೆಶಿ ಮಾಡಿದ್ರು. ಇದ್ರ ಜೊತೆಗೆ ಸಿದ್ದು ಸೈಡ್ ಲೈನ್ ಮಾಡೋಕೆ ಡಿಕೆಶಿ ತಮ್ಮದೇ ಪಟಾಲಂ ಕಟ್ಟಿಕೊಳ್ತಿದ್ದಾರೆ. ವ್ಯವಸ್ಥಿತವಾಗಿ ಸಿದ್ದರಾಮಯ್ಯರನ್ನ ದೂರ ಇಡೋಕೆ ಪ್ರಯತ್ನ ಮಾಡ್ತಿದ್ದಾರೆ. ಇದು ಸಿದ್ದರಾಮಯ್ಯನವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿಯೇ ಪಾದಯಾತ್ರೆಯಲ್ಲೂ ಅಂತರ ಕಾಯ್ದುಕೊಳ್ತಿದ್ರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅಂತರ ಕಾಯ್ದುಕೊಂಡ್ರು. ಮೊನ್ನೆ ನಡೆದ ಬಜೆಟ್ ಸುದ್ದಿಗೋಷ್ಠಿಗಳಲ್ಲೂ ಇಬ್ಬರು ಪ್ರತ್ಯೇಕತೆ ಮುಂದುವರಿಸಿದ್ರು.

ಪ್ರಸ್ತುತ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ನಂತರ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಮೊನ್ನೆ ನಡೆದ ರಾಹುಲ್ ಭೇಟಿ ದಿನವೇ ನಾನು ಪ್ರತ್ಯೇಕವಾಗಿ ಮಾತನಾಡಬೇಕು. ಒಂದು ತಿಂಗಳು ಬಿಟ್ಟು ಬರ್ತೆನೆ ಅಂತ ಸಿದ್ದರಾಮಯ್ಯ ಹೈಕಮಾಂಡ್​​ಗೆ ಮಾಹಿತಿ ಕೊಟ್ಟು‌ ಬಂದಿದ್ದಾರೆ. ಹೀಗಾಗಿ ಸದನ ಮುಗಿದ ನಂತ್ರ ದೆಹಲಿಗೆ ತೆರಳಿ ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದಲ್ಲಿ ಡಿಕೆಶಿ ನಡೆ ಹಾಗೂ ನಾಯಕರನ್ನ ನಡೆಸಿಕೊಳ್ತಿರುವ ರೀತಿಯ ಬಗ್ಗೆ ವಿವರಿಸಲಿದ್ದಾರಂತೆ. ಈ ಮೂಲಕ ಡಿಕೆಶಿ ಓಟಕ್ಕೆ ಲಗಾಮು‌ ಹಾಕೋಕೆ ಮಾಜಿ ಸಿಎಂ ಸ್ಕೆಚ್ ರೆಡಿ ಮಾಡಿಕೊಂಡಿದ್ದಾರೆಂದು ಅವರ ಆಪ್ತ ವಲಯದಲ್ಲೇ ಚರ್ಚೆಯಾಗ್ತಿದೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಕೋಲ್ಡ್ ವಾರ್ ಮುಂದುವರಿದಿದೆ. ಸಿದ್ದು ಸೈಡ್ ಲೈನ್ ಮಾಡೋಕೆ ಡಿಕೆಶಿ ಇನ್ನಿಲ್ಲದಂತೆ ಪ್ರಯತ್ನಗಳನ್ನ ಮಾಡ್ತಿದ್ದಾರೆ. ಅತ್ತ ಸಿದ್ದು ಕೂಡ ಡಿಕೆಶಿ ಲಗಾಮ್ ಹಾಕೋಕೆ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ.‌. ಇವರಿಬ್ಬರ ಪ್ರತಿಷ್ಠೆಯಿಂದಾಗಿ ಮುಖಂಡರು ಕಾರ್ಯಕರ್ತರು‌ ಗೊಂದಲಕ್ಕೆ ಬಿದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣ ಇದ್ರು ನಾಯಕರ ಮುನಿಸು ಪ್ರತಿಕೂಲ ಪರಿಣಾಮವನ್ನು ಬಿರುತ್ತಿದೆ. ಇವರಿಬ್ಬನ್ನು ಕಾಂಗ್ರೆಸ್​​ ಹೈಕಮಾಂಡ್ ಹೇಗೆ ಸರಿಪಡಿಸುತ್ತೋ ಅಂತ ಕಾದು ನೋಡ್ಬೇಕಿದೆ.

RELATED ARTICLES

Related Articles

TRENDING ARTICLES