ವಿಜಯಪುರ : ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ಮರು ಆರಂಭಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಯನ್ನು ಮೋಜು ಮಸ್ತಿ ರೀತಿ ನಡೆಸುತ್ತಿದ್ದಾರೆ. ಭೂರಿಭೋಜನ ಸವಿದು, ಕುಣಿದು ಕುಪ್ಪಳಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್ಸಿಗರ ಆರೋಗ್ಯಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯಾಗಿದೆ. ಇದು ಮೋಜು ಮಸ್ತಿಯ ಪಾದಯಾತ್ರೆ. ಪಾದಯಾತ್ರೆಯಲ್ಲಿ ಅಸಹ್ಯಕರ ವರ್ತನೆ ಮಾಡುತ್ತಿದ್ದಾರೆ. ಕುಣಿದು ಕುಪ್ಪಳಿಸಿಕೊಂಡು ಪಾದಯಾತ್ರೆಯ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಗಂಭೀರತೆ ಇಲ್ಲವೆಂದು ಕಾಂಗ್ರೆಸ್ ವಿರುದ್ಧ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಪಾದಯಾತ್ರೆಯಲ್ಲಿ ನಡೆಯೋದ್ರಿಂದ ಕಾಂಗ್ರೆಸ್ ನಾಯಕರ ತೂಕ ಕಡಿಮೆಯಾಗಬಹುದಷ್ಟೇ. ತೂಕ ಕಡಿಮೆ ಮಾಡಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ, ಎಂ ಬಿ ಪಾಟೀಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯು ಕೇವಲ ಅವರ ಶರೀರದ ಆರೋಗ್ಯ ಕಾಪಾಡಲು ಮಾತ್ರ, ದೇಶ, ರಾಜ್ಯದ ಆರೋಗ್ಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ಇಲ್ಲ ಎಂದರು.
ಚುನಾವಣೆ ಘೋಷಣೆಯಾದ್ರೆ ದಿಢೀರ್ ಅಂತ ಇವರಿಗೆ ನಡೆಯೋಕು ಆಗಲ್ಲ, ಆದ್ದರಿಂದ ಪಾದಯಾತ್ರೆ ಮೂಲಕ ಚುನಾವಣೆಯ ತಯಾರಿ ನಡೆದಿದೆ ಎಂದು ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.