ಮಂಡ್ಯ : ಪ್ರತಿ ಜಿಲ್ಲೆಗೆ ಹೋಗಿ 2 ದಿನ ಕ್ಯಾಂಪ್ ಮಾಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ H.D.ದೇವೇಗೌಡ ಅವರು ಹೇಳಿದ್ದಾರೆ.
ಹೆಚ್.ಡಿ ದೇವೇಗೌಡ ಅವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಪಡುವಲಪಟ್ಟಣ ಗ್ರಾಮ ದೇಗುಲದ ಉದ್ಘಾಟನೆ ಕಾರ್ಯಕ್ರಮದ ಪಾಲ್ಗೊಂಡು ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಗೆ ನಾಗಮಂಗಲ ಕ್ಷೇತ್ರಕ್ಕೆ ಮುಂದಿನ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಎಂದು ಘೋಷಣೆ ಮಾಡಿದರು.
ಇನ್ನು ಅಪ್ಪಾಜಿಗೌಡ ಹಾಗೂ ನೆಲ್ಲಿಗೆರೆ ಬಾಲು ಇಬ್ಬರನ್ನು ಶಾಸಕ ಸುರೇಶ್ ಗೌಡ ಜೊತೆಗೆ ಕರೆದುಕೊಂಡು ಹೋಗಬೇಕು. ಅಪ್ಪಾಜಿಗೌಡ ಎಂಎಲ್ಸಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಅವರನ್ನು ಎಂದಿಗೂ ಈ ಪಕ್ಷ ಕೈಬಿಡುವುದಿಲ್ಲ ಅವರು ಸ್ವಲ್ಪ ದಿನ ಸಮಾಧಾನವಾಗಿರಲಿ ಎಂದು ಹೇಳಿದರು.
ಅಲ್ಲದೇ ನೆಲ್ಲಿಗೆರೆ ಬಾಲು ಮತ್ತು ಅಪ್ಪಾಜಿಗೌಡರನ್ನು ಒಪ್ಪಿಸಿ ಸುರೇಶ್ ಗೌಡನನ್ನೆ ಮತ್ತೆ ಚುನಾವಣೆಗೆ ನಿಲ್ಲಿಸುವುದಕ್ಕೆ ತೀರ್ಮಾನಿಸಿದ್ದೇನೆ ಎಂದು ಹೆಚ್ಡಿಡಿ ಅವರು ನುಡಿದರು.
ಇನ್ನು ಜೆಡಿಎಸ್ ಪಕ್ಷ, ರೈತರಿಗಾಗಿ ದುಡಿದಿದೆ. ಕುಮಾರಸ್ವಾಮಿ ಅವರು ಕಾಂಗ್ರೆಸ್ನವರು ಮಾಡಿದ ತಪ್ಪಿಗೆ ರೈತರ ಸಾಲ ಮನ್ನಾ ಮಾಡಿದ್ದಾರೆ. ನಾವು ಸೋತ್ರು ಅಷ್ಟೇ, ಗೆದ್ರು ಅಷ್ಟೇ ರೈತಾಪಿ ವರ್ಗಕ್ಕೆ ದ್ರೋಹ ಮಾಡಲ್ಲ. ನನ್ನ ಪಕ್ಷವನ್ನು ಕೆಲವರು ಇಲ್ಲದಂತೆ ಮಾಡುತ್ತೇನೆ ಎಂದಿದ್ದಾರೆ. ಆ ರೀತಿ ಮಾಡೋ ಮಹಾನುಭವರಿಗೆ ಎದೆಯೊಡ್ಡಿ ನಿಲ್ಲುತ್ತೇನೆ ಇದೊಂದು ಹಠ ನನಗೆ ತುಂಬಾ ಇದೆ ಎಂದು ಜೆಡಿಎಸ್ ಕಡೆಗಣಿಸುವವರಿಗೆ ಸವಾಲ್ ಹಾಕಿದ್ದಾರೆ.
ಸದ್ಯ ಪ್ರತಿ ಜಿಲ್ಲೆಗೆ ಹೋಗಿ ಎರಡು ದಿನ ಕ್ಯಾಂಪೇನ್ ಮಾಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಜತೆಗೆ ಏನೇ ಆದರೂ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ಇಲ್ಲಿಯತನಕ ಒಬ್ಬರ ಹಂಗಿಗೆ ನಾನೆಂದು ತಲೆಬಾಗಿಲ್ಲ. ಜನ ಮತ್ತು ದೇವರು ಈ ಇವರಿಬ್ಬರನ್ನೆ ನಾನು ನಂಬೊದು. ಸಾವಿರಾರು ಕೋಟಿ ಖರ್ಚು ಮಾಡಿದರು ಜನರ ಆಶೀರ್ವಾದ ಇಲ್ಲ, ಅಂದ್ರೆ ಸಾಧ್ಯ ಆಗುವುದಿಲ್ಲ. ಚುನಾವಣೆಯನ್ನು ಹಣದಿಂದ ಗೆಲ್ಲಲು ಹೋಗುವುದಿಲ್ಲ. ಭಗವಂತನ ಮತ್ತು ಜನರ ಆಶೀರ್ವಾದ ನಂಬಿ ಚುನಾವಣೆಗೆ ಹೋಗುತ್ತೇನೆ ಎಂದು ಹೆಚ್ಡಿಡಿ ಮಾತನಾಡಿದ್ದಾರೆ.