ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ನಡೆದು ಇನ್ನೂ 24 ಗಂಟೆಗಳೂ ಕಳೆದಿಲ್ಲ, ಬಿಜೆಪಿಯ ಹಲವು ಮಂತ್ರಿಗಳು, ಶಾಸಕರು ನಾ ಮುಂದು ತಾ ಮುಂದು ಎಂದು ಒಂದು ಕೋಮಿನ ವಿರುದ್ಧ ಹೇಳಿಕೆಗಳನ್ನು ಕೊಡು ಶುರುಮಾಡಿಬಿಟ್ಟಿದ್ದಾರೆ. ಒಂದು ಕೊಲೆ ಪ್ರಕರಣದ ತನಿಖೆಯೆಂದರೆ ಅದು ನೀರು ಕುಡಿದು ಗ್ಲಾಸ್ ಕೆಳಗಿಟ್ಟಂತೆ ಅಲ್ಲ. ಏಕೆಂದರೆ ಕಣ್ಣೆದುರೇ ಒಂದು ಕೊಲೆಯಾಗಿದ್ದರೂ, ಆ ಕೊಲೆಗೆ ಕಾರಣವೇನು, ಕೊಲೆಯ ಉದ್ದೇಶವೇನು, ಕೊಲೆಯ ಹಿಂದಿನ ನಿಜವಾದ ಸೂತ್ರಧಾರ ಯಾರು ಎನ್ನುವುದನ್ನೆಲ್ಲ ವಿಚಾರಣೆ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ನಮ್ಮ ಮಂತ್ರಿಮಹೋದಯರುಗಳು ತಾವೆ ವಿಚಾರಣಾ ಅಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಈಶ್ವರಪ್ಪನವರಂತೂ ನನ್ನ ಮೈಯೆಲ್ಲ ಕುದಿಯುತ್ತಿದೆ. ಮುಸಲ್ಮಾನ ಗೂಂಡಾಗಳು ಇದನ್ನು ಮಾಡಿದೆ ಎಂದು ತೀರ್ಪನ್ನೇ ನೀಡಿಬಿಟ್ಟಿದ್ದಾರೆ. ಈಗ ಅದಕ್ಕೆ ಸಿಟಿ ರವಿ ತಮ್ಮದೂ ಒಂದು ‘ಉಗ್ರ’ ಹೇಳಿಕೆ ದಾಖಲಿಸಿದ್ದಾರೆ.
ಸಿಟಿ ರವಿಯವರು ನೀಡಿರುವ ಹೇಳಿಕೆಯಲ್ಲಿ ‘ಹರ್ಷನ ಕೊಲೆ ಹಿಂದಿನ ಜಾಲ ಭೇದಿಸಬೇಕಿದೆ, ಯಾರೇ ಇರ್ಲಿ ಬಂಧಿಸಿ ಕಠಿಣ ಕ್ರಮವಹಿಸಬೇಕು’ ಎಂಬ ಒಂದು ವಾಕ್ಯವನ್ನು ಬಿಟ್ಟರೆ ಉಳಿದೆಲ್ಲ ವಾಕ್ಯಗಳೂ ಸಮಾಜದ ಸಾಮರಸ್ಯಕ್ಕೆ ಕೊಳ್ಳಿಯಿಡುವಂತೆಯೇ ಇದೆ. ಒಂದು ಕೊಲೆಯನ್ನು ಆಧಾರವಾಗಿಟ್ಟುಕೊಂಡು ರವಿ ‘ಅಸಹಿಷ್ಣುತೆ ಇಸ್ಲಾಂ ಹುಟ್ಟಿದಾಗಿನಿಂದಲೂ ಇದೆ, ಸಹಿಷ್ಣುತೆಗೂ ಇಸ್ಲಾಂಗೂ ಸಂಬಂಧ ಇಲ್ಲ, ಇಸ್ಲಾಂಗೆ ಇನ್ನೊಂದನ್ನು ಒಪ್ಪುವ, ಸಹಿಸಿಕೊಳ್ಳುವ ಮಾನಸಿಕತೆ ಇಲ್ಲ. ಕೆಲವೊಮ್ಮೆ ಇಸ್ಲಾಂ ಉಗ್ರರೂಪ ತಾಳುತ್ತೆ, ಕೆಲವೊಮ್ಮೆ ನ್ಯೂಟ್ರಲ್ ಆಗಿರುತ್ತೆ. ಅಲ್ಲಿ ವಿಶ್ಲೇಷಣೆಗೆ ಅವಕಾಶ ಇಲ್ಲ, ಇಸ್ಲಾಂಅನ್ನು ವಿದ್ವಾಂಸರು ಒರೆಗೆ ಹಚ್ವಬೇಕು’ ಎಂದು ಪುಂಖಾನುಪುಂಖವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಕೋಮುವಾದಿ ಹೇಳಿಕೆಯನ್ನು ಕಾರಿದ್ದಾರೆ. ಹಾಗೆ ನೋಡಿದರೆ ಆ ಒಂದು ಕೊಲೆಗಿಂತ ರವಿಯವರ ಈ ಹೇಳಿಕೆ ಅತ್ಯಂತ ಹೆಚ್ಚು ಅಪಾಯಕಾರಿ ಮತ್ತು ಮುಂದೆ ಬರಿ ಈ ಒಂದು ಹೇಳಿಕೆಯಿಂದ ಇಡೀ ಸಮಾಜವೇ ಹೊತ್ತಿ ಉರಿಯಬಹುದು.
ಅನ್ಯಕೋಮಿನ ವಿರುದ್ಧ ಹೇಳಬಾರದ ನಂಜಿನ ಮಾತನ್ನೆಲ್ಲ ಹೇಳಿದ ನಂತರ ಸಿಟಿ ರವಿ ಕೊನೆಯಲ್ಲಿ ತಿಪ್ಪೆಸಾರಿಸಿದಂತೆ ‘ಇಸ್ಲಾಂ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹರ್ಷ ಪೋಸ್ಟ್ ಹಾಕ್ತಿದ್ದ ಅನ್ನೋ ಕಾರಣಕ್ಕೆ ಹತ್ಯೆ ಮಾಡಿದ್ರೆ ಸತ್ಯಾಸತ್ಯತೆ ಹೊರಗೆ ಬರಲಿ, ಈಗಲೇ ನಾನು ಏನನ್ನೂ ಹೇಳಲ್ಲ, ತನಿಖೆಗೂ ಮುಂಚೆ ಏನೂ ಹೇಳಲ್ಲ, ಎಲ್ಲ ಹಿನ್ನೆಲೆ ಪರಿಗಣಿಸಿ ಸರ್ಕಾರ ಕ್ರಮ ವಹಿಸಲಿದೆ’ ಎಂದು ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ.
ಇದೆಲ್ಲಕ್ಕೂ ಕಳಸವಿಟ್ಟಂತೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಭಜರಂಗದಳದ ಹರ್ಷ ಕೊಲೆಗೆ ಸಂಬಂಧಿಸಿದಂತೆ ಹಲವು ಅನ್ಯಕೋಮಿನ ಸಂಘಟನೆಗಳನ್ನು ಬ್ಯಾನ್ ಮಾಡುವ ಸಲಹೆ ನೀಡುತ್ತ, ವಿಚಾರಣೆಗೆ ಮುನ್ನವೇ ಅಪರಾಧಿಗಳು ಯಾರು ಎಂದು ಇನ್ನೂ ತಿಳಿಯುವ ಮುನ್ನವೇ ಸಿಕ್ಕ ಸಿಕ್ಕವರನ್ನೆಲ್ಲ ಗುಂಡಿಕ್ಕಿ ಕೊಂದು ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಲಿ ಎಂಬ ಮೂರ್ಖ ಹೇಳಿಕೆಯನ್ನು ನೀಡಿದ್ದಾರೆ. ಶಾಂತಿಯನ್ನು ಕಾಪಾಡಬೇಕಾಗಿರುವ ನಾಯಕರೇ, ಶಾಂತಿಯನ್ನು ಕಾಪಾಡಿಕೊಳ್ಳಲು ಜನತೆಗೆ ಕರೆಕೊಡಬೇಕಾಗಿರುವ ನಾಯಕರೇ ಹೀಗೆ ಹಿಂಸೆಯನ್ನು ಪ್ರಚೋದಿಸಿದರೆ ಸಮಾಜ ಹೊತ್ತಿ ಉರಿಯದಿರಲು ಸಾಧ್ಯವೆ? ಬೇಲಿಯೇ ಎದ್ದು ಹೊಲ ಮೇಯ್ದರೆ ಮಾಡುವುದೇನು? ಹರ ಕೊಲ್ಲಲ್ ಪರ ಕಾಯ್ವನೆ?
ಓಂಪ್ರಕಾಶ್ ನಾಯಕ್, ಪವರ್ ಟಿವಿ