ಒಂದೇ ಹಂತದಲ್ಲಿ ನಡೆದ ಪಂಜಾಬ್ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ.. ಕೆಲವೊಂದುಕಡೆ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗಳು ನಡೆದಿವೆ. ಇಷ್ಟು ಬಿಟ್ರೆ, ಒಟ್ಟು 117 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಕಾಂಗ್ರೆಸ್ ಗೆಲ್ಲಿಸಲು ಸಿಎಂ ಚರಣ್‌ಜಿತ್ ಚಿನ್ನಿ ಶತಾಯಗತಾಯ ಪ್ರಯತ್ನ ಮಾಡಿದ್ದಾರೆ. ಇನ್ನು, ಎಎಪಿ ಸಿಎಂ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದ್ರೆ, ಮತದಾರರು ಯಾರ ಹಣೆಬರಹ ಬರೆದಿದ್ದಾರೆ ಅನ್ನೋದು ಫಲಿತಾಂಶದ ನಂತರವಷ್ಟೇ ಗೊತ್ತಾಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 20 ರಿಂದ 30 ಸೀಟು ಗೆಲ್ಲೋದು ಡೌಟ್ ಎಂದಿದ್ದಾರೆ ಮಾಜಿ ಸಿಎಂ ಅಮರೀಂದರ್ ಸಿಂಗ್.
ಮೊಗಾ ಜಿಲ್ಲೆಯ ಚುನಾವಣಾ ಕೇಂದ್ರಗಳಿಗೆ ಹೋಗದಂತೆ ನಟ ಸೋನು ಸೂದ್ ಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿತ್ತು. ಮೊಗಾ ವಿಧಾನಸಭಾ ಕ್ಷೇತ್ರದಿಂದ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಸೋನು ಸೂದ್ ಅಲ್ಲಿಗೆ ಹೋದರೆ ಮತದಾರರ ಮೇಲೆ ಪ್ರಭಾವ ಬೀರಿದಂತೆ ಆಗುತ್ತದೆ ಎಂದು ಶಿರೋಮಣಿ ಅಕಾಲಿ ದಳ್ ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿತ್ತು. ಷರತ್ತು ಮೀರಿಗ ಎಂಟ್ರಿಯಾದ ನಟನ ಕಾರನ್ನು ಜಪ್ತಿ ಮಾಡಲಾಯ್ತು.
ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆದಿದೆ. 16 ಜಿಲ್ಲೆಗಳ 59 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 627 ಅಭ್ಯರ್ಥಿಗಳ ಹಣೆ ಬರಹ ಬರೆದಿದ್ದಾರೆ 2.15 ಕೋಟಿ ಮತದಾರರು. ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ ಅಕ್ರಮ ಕಂಡುಬಂದಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಸಮಾಜವಾದಿ ಪಕ್ಷದ ಪಕ್ಕದಲ್ಲಿರುವ ಬಟನ್ ಅನ್ನು ಮತದಾರರು ಒತ್ತಿದರೂ ಸಹ, ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ನಲ್ಲಿ ಬಿಜೆಪಿಯ ಸ್ಲಿಪ್ ಬರುತ್ತಿದೆ ಎಂದು ಪಕ್ಷ ಆರೋಪಿಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಜಸ್ವಂತ್ನಗರದಲ್ಲಿ ಮತದಾನ ಮಾಡಿದರು. ಕರ್ಹಾಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಉತ್ತರ ಪ್ರದೇಶದಿಂದ ಖಂಡಿತ ನಿರ್ಮೂಲನೆಯಾಗುತ್ತದೆ. ಉತ್ತರ ಪ್ರದೇಶದ ರೈತರು ಬಿಜೆಪಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಒಂದ್ಕಡೆ ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆದಿದ್ರೆ, ಮತ್ತೊಂದು ಕಡೆ ಬಿಜೆಪಿ ನಾಯಕರು ನಾಲ್ಕನೆ ಹಂತದ ಚುನಾವಣೆಗಾಗಿ ಪ್ರಚಾರ ನಡೆಸಿದ್ರು. ಉತ್ತರ ಪ್ರದೇಶದ ಹಾರ್ಡೋಯಿಯಲ್ಲಿ ರ್ಯಾಲಿ ನಡೆಸಿದ ಮೋದಿ, ಸಮಾಜವಾದಿ ಪಕ್ಷ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ರು. 2008ರಲ್ಲಿ ನಡೆದ ಅಹ್ಮದಾಬಾದ್ ಸ್ಫೋಟದ 38 ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇದೇ ಉತ್ತರ ಪ್ರದೇಶದಲ್ಲಿ ಕೂಡ ಹಲವು ಭಯೋತ್ಪಾದಕ ದಾಳಿಗಳಾಗಿವೆ ಎಂದು ಆರೋಪಿಸಿದ್ರು.
ಬಿಜೆಪಿ ಹೊರತು ಇನ್ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಜನರ ಬದುಕಲ್ಲಿ ಬೆಳಕು ಮೂಡಲ್ಲ ಎನ್ನುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆದ್ರೆ, ಬಿಜೆಪಿಯನ್ನು ನಂಬಬೇಡಿ ಅಂತಿದ್ದಾರೆ ಕೆಂಪು ಟೋಪಿಯ ಸಮಾಜವಾದಿ ಪಕ್ಷದ ನಾಯಕರು ಸದ್ಯ ಯಾರು ಏನೇ ಹೇಳಿಕೊಂಡ್ರೂ. ಆರೋಪ ಮಾಡಿಕೊಂಡ್ರು ಮತದಾರರ ನಿರ್ಧಾರವೇ ಅಂತಿಮ.. ಸದ್ಯ ಚುನಾವಣ ಫಲಿತಾಂಶವೇ ಎಲ್ಲದಕ್ಕೂ ಉತ್ತರ ನೀಡಲಿದೆ.