ಕರ್ನಾಟಕದಲ್ಲಿ ಹೊತ್ತಿರುವ ಹಿಜಾಬ್ ಕಿಚ್ಚು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡ್ತಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿ ಕಾರ್ತಿದ್ದಾರೆ.. ಆದ್ರೆ, ಮೊದ ಮೊದಲು ತಟಸ್ಥರಾಗಿದ್ದವರು, ಆಗೊಂದು ಈಗೊಂದು ಹೇಳಿಕೆ ಕೊಟ್ತಾನೆ ಬಂದಿದ್ರು.. ಈ ಮಧ್ಯೆ, ಅವರಿಗೆ ಸಿಕ್ಕಿದ್ದು ಈಶ್ವರಪ್ಪ ಬಾವುಟ ವಿಚಾರ.. ಅಧಿವೇಶನ ಆರಂಭವಾದಾಗಿನಿಂದಲೂ ಹಿಜಾಬ್ ವಿಚಾರ ಸದ್ದು ಮಾಡಿದ್ದೇ ಕಮ್ಮಿ, ಅದ್ರ ಬದಲು ಬಾವುಟ ವಿಚಾರ ಇಟ್ಕೊಂಡು ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿದ್ದು ಬಿಟ್ರೆ ಮತ್ತೇನೂ ಇಲ್ಲ ಅನ್ನೋದು ಸತ್ಯ ಕೂಡ.
ಹಿಜಾಬ್ ವಿಚಾರ ಗಂಭೀರವಾಗಿ ತೆಗೆದುಕೊಂಡಿಲ್ವಾ..? ಈಶ್ವರಪ್ಪ ರಾಜೀನಾಮೆ ಕೊಡಿಸೋದೇ ಪ್ರತಿಷ್ಠೆಯಾಗಿ ಹೋಯ್ತಾ ಅನ್ನೋ ಪ್ರಶ್ನೆಗಳು ಎದ್ದಿವೆ. ಹಿಜಾಬ್ ಬಿಕ್ಕಟ್ಟನ್ನು ಪರಿಹರಿಸುವ ಬದಲು ಬಾವುಟದ ವಿಷಯಕ್ಕೆ ಹಾರಿದೆ ಕಾಂಗ್ರೆಸ್ ಪಕ್ಷ.. ಮತ್ತೊಂದು ಪ್ರಮುಖ ವಿಚಾರವೆಂದ್ರೆ, ಟೀಕೆ ಖಂಡನೆಗಳ ಫಜೀತಿಯಿಂದ ಬೊಮ್ಮಾಯಿ ಸರ್ಕಾರ ತಪ್ಪಿಸಿಕೊಳ್ಳುವಂತೆ ಮಾಡಿದೆ ಸ್ವತಃ ಕಾಂಗ್ರೆಸ್ ಪಕ್ಷ. ಹೌದು, ಬಿಟ್‌ಕಾಯಿನ್, 40% ಕಮಿಷನ್ ವಿಚಾರ ಚರ್ಚೆಯಿಂದ ಸರ್ಕಾರ ಸೇಫ್ ಆದಂತಾಗಿದೆ. ದಕ್ಕಿದ ಅವಕಾಶವನ್ನು ಕೈಯಾರೆ ಕಳಕೊಂಡಿದ್ದಾರೆ ವಿರೋಧ ಪಕ್ಷದ ನಾಯಕರು ಮಂತ್ರಿ ಈಶ್ವರಪ್ಪ ರಾಜೀನಾಮೆ ಎಂಬುದು ಮಹಾನ್ ರಾಷ್ಟ್ರೀಯ ಕಥಾ ವಸ್ತುವೇ ಅಲ್ಲ. ಆದ್ರೂ, ಅದ್ರ ಸುತ್ತಾನೆ ಸುತ್ತುತ್ತಿದ್ದಾರೆ ಕೈ ನಾಯಕರು.
ಜಂಟಿ ಅಧಿವೇಶನ ರಾಜ್ಯಪಾಲರ ಭಾಷಣದ ಮೇಲೆ ಗಂಭೀರ ಚರ್ಚೆಗಳು ನಡೆಯಬೇಕಿತ್ತು. ಆದ್ರೆ ಈಶ್ವರಪ್ಪನವರ ರಾಷ್ಟ್ರ ಧ್ವಜದ ಹೇಳಿಕೆ ಎಲ್ಲವನ್ನೂ ನುಂಗಿಹಾಕಿದೆ. ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ಹಾಕ್ಬೇಕು. ಅವರನ್ನ ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಹೋರಾಟಕ್ಕಿಳಿದಿದೆ. ಕಳೆದ ನಾಲ್ಕು ದಿನಗಳಿಂದ ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡರಲ್ಲೂ ಆಹೋರಾತ್ರಿ ಧರಣಿ ಮುಂದುವರಿಸಿದೆ.
ಕಾಂಗ್ರೆಸ್ ನಾಲ್ಕನೇ ದಿನಗಳಿಂದ ಆಹೋರಾತ್ರಿ ಪ್ರತಿಭಟನೆ ನಡೆಸ್ತಾನೇ ಇದೆ. ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿದೆ. ಆದ್ರೆ ಸರ್ಕಾರ ಮಾತ್ರ ಯಾವುದರಲ್ಲೂ ತಲೆ ಕೆಡಿಸಿಕೊಳ್ಳದೆ ಈಶ್ವರಪ್ಪನವರ ಸಮರ್ಥನೆಗೆ ನಿಂತಿದೆ. ಹೀಗಾಗಿ ಕಾಂಗ್ರೆಸ್ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಜೊತೆಗೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವಂತೆ ತಮ್ಮ ಕಾರ್ಯಕರ್ತರಿಗೂ ಸೂಚಿಸಿದೆ.
ಸದನ ಮುಗಿಯುತಿದ್ದಂತೆ ದೆಹಲಿಗೆ ಬರುವಂತೆ ಮಾಜಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಿರಿಯ ನಾಯಕರಿಗೆ ಹೈಕಮಾಂಡ್ ಕರೆ ನೀಡಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಉತ್ತಮ ಅವಕಾಶ ಇದೆ. ಹೀಗಾಗಿ ಗುಂಪುಗಾರಿಕೆ, ಭಿನ್ನಮತ ಬಿಟ್ಟು ಒಟ್ಟಿಗೆ ಕೆಲಸ ಮಾಡವಂತೆ ಸೂಚಿಸುವ ಸಾಧ್ಯತೆ ಇದೆ.
ಒಟ್ಟಾರೆ ಪ್ರತಿ ಪಕ್ಷದ ಮೇಲೆ ರಾಜ್ಯದ ಜನರಿಗಿದ್ದ ನಿರೀಕ್ಷೆ ಹುಸಿಗೊಳಿಸಿದ್ದಾರೆ ಕಾಂಗ್ರೆಸ್ ನಾಯಕರು. ಅಹೋರಾತ್ರಿ ಧರಣಿ ಎಂಬುದು ಈಗ ಕೇವಲ ಒಂದು ರಾಜಕೀಯ ಮೆಲೋಡ್ರಾಮವಾಗಿದೆ. ಚುನಾವಣೆ ಹತ್ತಿರುವಾಗ್ತಿರುವ ಹೊತ್ತಲ್ಲಿ ಕೇವಲ ಗಿಮಿಕ್‌ಗೆ ಮುಂದಾಯ್ತಾ ವಿರೋಧ ಪಕ್ಷ ಅನ್ನೋ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ. ಆಡಳಿತ ಪಕ್ಷದ ದುರಾಡಳಿತ ಮತ್ತು ಭ್ರಷ್ಟಾಚಾರದ ಮೇಲೆ ನಿಯಂತ್ರಣ ಹೇರಲು ವಿಫಲವಾಗಿದ್ದು, ಸದನದಲ್ಲಿ ಚರ್ಚೆ ಇಲ್ಲ, ವಿಮರ್ಶೆಯೂ ಇಲ್ಲ, ಕಾಲಾಹರಣವೇ ವಿಪಕ್ಷದ ಅಜೆಂಡವಾಯ್ತಾ ಅನ್ನೋ ಜಿಜ್ಞಾಸೆ ಹೆಚ್ಚಾಗಿದೆ.