Monday, December 23, 2024

ಕರುನಾಡಲ್ಲಿ ನಿಲ್ಲದ ಹಿಜಾಬ್​-ಕೇಸರಿ ಸಂಘರ್ಷ..!

ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇಂದು ಬಿಗಿ ಭದ್ರತೆಯಲ್ಲಿ ರಾಜ್ಯಾದ್ಯಂತ ಹೈಸ್ಕೂಲ್​ಗಳು ಓಪನ್​ ಆಗಿವೆ. ಹೈಕೋರ್ಟ್​ನ ಮಧ್ಯಂತರ ಆದೇಶವಿದ್ದರೂ ಶಾಲೆಗಳಿಗೆ ಹಿಜಾಬ್​ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು.

ಹಿಜಾಬ್​​-ಕೇಸರಿ ಸಂಘರ್ಷದಿಂದ ಕ್ಲೋಸ್​​ ಆಗಿದ್ದ ಹೈಸ್ಕೂಲ್​ಗಳನ್ನು ಇಂದಿನಿಂದ​ ರಾಜ್ಯಾದ್ಯಂತ ಪೊಲೀಸ್​​ ಬಿಗಿ ಭಧ್ರತೆಯಲ್ಲಿ ಓಪನ್​ ಮಾಡಲಾಗಿದೆ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಯಾವುದೇ ರೀತಿಯ ಧರ್ಮ ಸಂಕೇತ ವಸ್ತ್ರಗಳನ್ನು ಧರಿಸಬಾರದು ಎಂದು ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದ್ದರೂ ಕೆಲವು ಜಿಲ್ಲೆಗಳಲ್ಲಿ ಕೋರ್ಟ್​ ಆದೇಶವನ್ನ ದಿಕ್ಕರಿಸಿ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಕೊಪ್ಪಳ, ಕಲಬುರಗಿ, ಉಡುಪಿ, ಬೀದರ್​ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಸಹ ‘ಧರ್ಮ’ಯುದ್ಧ ತಾರಕಕ್ಕೇರಿತ್ತು.

ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರೋ ಉರ್ದು ಪ್ರೌಢ ಶಾಲೆಗೆ ಕೋರ್ಟ್​ ಆದೇಶವನ್ನ ದಿಕ್ಕರಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಆಗಮಿಸಿದ್ದರು. ಪರಿಸ್ಥಿತಿ ಅರಿತ ಶಿಕ್ಷಕರು ಹಿಜಾಬ್‌ ತೆಗೆದು ಕೊಠಡಿಗೆ ಬರುವಂತೆ ಸೂಚಿಸಿದರು. ಮುಖ್ಯಶಿಕ್ಷಕರ ಮಾತಿಗೆ ಮರುಮಾತಾಡದೆ ಹಿಜಾಬ್ ತೆಗೆದು ಶಾಲಾ ಕೊಠಡಿಗೆ ಆಗಮಿಸಿದರು.

ಕೋರ್ಟ್​ ಮಧ್ಯಂತರ ಆದೇಶವನ್ನ ಧಿಕ್ಕರಿಸಿ, ಬೀದರ್​​ನ ಬ್ರಿಮ್ಸ್ ಕಾಲೇಜ್​ನಲ್ಲಿ ಹಿಜಾಬ್​ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. B.sc ನರ್ಸಿಂಗ್ ಪರೀಕ್ಷೆಗೆ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಬ್ರಿಮ್ಸ್ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಿದ ಹಿನ್ನೆಲೆ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿಯೇ ಪರೀಕ್ಷೆ ಬರೆದರು.

ಇನ್ನು ಕೊಪ್ಪಳದಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದ್ದ ಶಿಕ್ಷಕಿಯೊಬ್ಬರು ಹಿಜಾಬ್​ ಧರಿಸಿಯೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದದ್ದು ಕಂಡುಬಂತು. ಕೊಪ್ಪಳ ನಗರದಲ್ಲಿರುವ ಉರ್ದು ಶಾಲೆಗೆ ಮಕ್ಕಳ ಜೊತೆ ಶಿಕ್ಷಕಿಯೂ ಹಿಜಾಬ್ ಧರಿಸಿ ಆಗಮಿಸಿದ್ದರು. ಶಾಲೆಯಲ್ಲಿ ತರಗತಿಗಳು ನಡೆಯದಿದ್ದ ಕಾರಣ ಮಕ್ಕಳು ಭಾರತದ ನಕ್ಷೆ ಬಿಡಿಸುತ್ತಿದ್ದರು.

ಶಿವಮೊಗ್ಗದಲ್ಲೂ ಕೂಡ ಹೈಕೋರ್ಟ್‌ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕಾದ ಶಿಕ್ಷಕಿ ಹಿಜಾಬ್​ ಧರಿಸಿಯೇ ವರ್ಗಾವಣೆ ಕೌನ್ಸಿಲಿಂಗ್‌ಗೆ ಆಗಮಿಸಿದ್ದರು. ಶಿವಮೊಗ್ಗದ ಸರ್ಕಾರಿ ಶಾಲೆಗೆ ಬಂದಿದ್ದ ಶಿಕ್ಷಕಿ ಹಿಜಾಬ್​ ಧರಿಸಿಯೇ ಡಿಡಿಪಿಐ ಕಚೇರಿಗೆ ಹೋಗಿದ್ದು ಕಂಡುಬಂತು.

ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿನಿಯರು ತಡೆದ ಶಿಕ್ಷಕರು, ಬುರ್ಖಾ ತೆಗೆಯುವಂತೆ ಸೂಚಿಸಿದರು. ಆದರೆ ಇದಕ್ಕೆ ಒಪ್ಪದ 13ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಮನೆಗೆ ತೆರಳಿದರು.

ಹಿಜಾಬ್‌ ಸಂಘರ್ಷದ ಮಧ್ಯೆ ಸೌಹಾರ್ದತೆಗೆ ವಿಜಯಪುರ ಸಾಕ್ಷಿ ಆಯಿತು. ಸಂಘರ್ಷಕ್ಕೆ ಆಸ್ಪದ ಕೊಡದ ವಿದ್ಯಾರ್ಥಿನಿಯರು, ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು ಕೈ ಕೈ ಹಿಡಿದು ನಾವೆಲ್ಲ ಒಂದೇ. ಧರ್ಮವನ್ನ ಕ್ಲಾಸ್ ಹೊರಗೆ ಇಟ್ಟಿದ್ದೀವಿ, ಭೇದ-ಭಾವ ಮಾಡಲ್ಲ ಎನ್ನುವ ಸಂದೇಶ ಸಾರಿದರು. ನಗರದ ಸರ್ಕಾರಿ ಬಾಲಕಿಯರ ಶಾಲೆಗೆ ಹಿಜಾಬ್​ ಧರಿಸಿ ಆಗಮಿಸಿದ್ದ 6 ವಿದ್ಯಾರ್ಥಿನಿಯರಿಗೆ ಸೌಹಾರ್ದತೆ ಪಾಠ ಕಲಿಸಿದರು.

ಇನ್ನು ದಾವಣಗೆರೆಯಲ್ಲಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು. ನಗರದ ಮೋತಿ ವೀರಪ್ಪ, ಸೀತಮ್ಮ ಶಾಲೆಗಳಿಗೆ ಭೇಟಿ ನೀಡಿದ್ದ ಡಿಸಿ ಮಹಾಂತೇಶ್ ಬೀಳಗಿ, ಯಾವುದೇ ಅಂಜಿಕೆ ಇಲ್ಲದೆ ತರಗತಿಗಳಿಗೆ ಬನ್ನಿ. ಯಾರಾದರೂ ಬೇದರಿಕೆ ಹಾಕಿದರೆ ಕೂಡಲೇ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಒಟ್ಟಾರೆ ರಾಜ್ಯದಲ್ಲಿ ಹೈಕೋರ್ಟ್​ ಮಧ್ಯಂತರ ಆದೇಶದ ನಡುವೆಯೂ ಕೆಲ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸುತ್ತಿದ್ದಾರೆ. ಜಾತಿ-ಧರ್ಮ ಬಿಟ್ಟು ನಾವೆಲ್ಲರೂ ಒಂದೇ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲಿ, ಮೊದಲಿನಂತೆ ಶಾಲಾ-ಕಾಲೇಜುಗಳಲ್ಲಿ ಸೌಹಾರ್ದತೆ ಆದಷ್ಟು ಬೇಗ ಮೂಡಲಿ ಅನ್ನೋದೆ ನಮ್ಮ ಆಶಯ.​

RELATED ARTICLES

Related Articles

TRENDING ARTICLES