ಮೈಸೂರು : ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಇಂದು ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗ 4 ಲಕ್ಷ 57 ಸಾವಿರ ಕೋಟಿ ರೂ. ಸಾಲ ಮಾಡಿದೆ. ನನ್ನ ಅಧಿಕಾರಾವಧಿಯಲ್ಲಿ 2 ಲಕ್ಷ 15 ಸಾವಿರ ಕೋಟಿ ರೂ. ಸಾಲ ಮಾಡಿದ್ದೆವು. ಮೂರು ವರ್ಷಗಳಲ್ಲಿ ಡಬಲ್ ಸಾಲ ಮಾಡಿದ್ದಾರೆ. ಇವರಿಂದ ಜನಪರ ಬಜೆಟ್ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹಾಗಾಗಿ, ರಾಜ್ಯ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ.
ಸಾಮಾನ್ಯವಾಗಿ ರಾಜ್ಯಪಾಲರು ಇವರು ಬರೆದುಕೊಟ್ಟದ್ದನ್ನು ಓದುತ್ತಾರೆ ಅಷ್ಟೇ ಎಂದರು. ಕೇಂದ್ರ ಸರ್ಕಾರವನ್ನು ಕೇಳುವ ಧಮ್ ರಾಜ್ಯದಲ್ಲಿ ಯಾರಿಗೂ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಷೇರು ಅನುದಾನ ಕಡಿಮೆಯಾಗಿದೆ. ಏನೂ ಅಭಿವೃದ್ಧಿ ಮಾಡದೇ ಮೋದಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶ ಈಗ ದಿವಾಳಿಯಾಗುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.