Saturday, November 2, 2024

ಸಿದ್ದು ಡಿಕೆಶಿ ರಹಸ್ಯ ಮೀಟಿಂಗ್

ಮೇಕೆದಾಟು ಪಾದಯಾತ್ರೆ ಮಾಡಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಕಾಂಗ್ರೆಸ್ ನಾಯಕರಲ್ಲಿ ಮತ್ತೆ ಅಸಮಾಧಾನ ಹೊಗೆಯಾಡುತ್ತಿದೆ. ಮೊನ್ನೆಯಷ್ಟೇ ಪುಲಕೇಶಿನಗರ ಟಿಕೆಟ್ ವಿಚಾರ ಕೂಡ ಇದನ್ನು ಬಹಿರಂಗ ಪಡಿಸಿತ್ತು. ಹೀಗಾಗಿ ಕೆಲ ನಾಯಕರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಸರತ್ತು ನಡೆಯುತ್ತಿದೆ. ಆದ್ರೆ, ಆಡಳಿತ ಪಕ್ಷ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಿದ್ದ ಕೈ ನಾಯಕರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಮೇಕೆದಾಟು ಪಾದಯಾತ್ರೆ ಮಾಡಿ ಒಗ್ಗಟ್ಟಿನ ಮಂತ್ರ ಪಠಣ ಮಾಡಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಕಿತ್ತಾಟ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.

ಅದು ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬದಲಿಗೆ ಪರ್ಯಾಯವಾಗಿ ಆಪ್ತ ಸಂಪತ್ ರಾಜ್‌ಗೆ ಡಿಕೆಶಿ ಮನ್ನಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಖಂಡ ಪರ ಹಲವು ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ದೂರು ಕೂಡ ನೀಡಿದ್ರು. ಈ ವೇಳೆ ಮಾಜಿ ಶಾಸಕ ಅಶೋಕ್ ಪಟ್ಟಣ್‌, ಸಿದ್ದರಾಮಯ್ಯ ನಡುವೆ ನಡೆದ ಸಂಭಾಷಣೆ ಸಾಕಷ್ಟು ಸದ್ದು ಮಾಡಿತ್ತು. ಇದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದಂತೆ ಹೈಕಮಾಂಡ್ ಕೂಡ ವರದಿ ಕೇಳಿತ್ತು. ಹಾಗೆ ಕಾಂಗ್ರೆಸ್ ನಿಷ್ಠಾವಂತ ಮುಖಂಡರು ಕೂಡ ಸುರ್ಜೇವಾಲ ಹಾಗೂ ವೇಣುಗೋಪಾಲ ಗಮನಕ್ಕೆ ತಂದಿದ್ದಾರೆ.

ದಿನದಿಂದ ದಿನಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಕೆಲ ವಿಚಾರ ಆಂತರಿಕ ಸಂಘರ್ಷ ನಡೆದಿದೆ. ಅದರಲ್ಲೂ ಮುಂದಿನ ನಾಯಕತ್ವ ಹಾಗೂ ಟಿಕೆಟ್ ವಿಚಾರವಾಗಿ ಇವರಿಬ್ಬರ ನಡುವೆ ಇನ್ನಷ್ಟು ಬಿರುಕು ಮೂಡುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಈ ವಿಚಾರ ಕೆಲ ಕಾಂಗ್ರೆಸ್ ಮುಖಂಡರಿಗೆ ತೀವ್ರ ಬೇಸರ ತರಿಸಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ರಾಜ್ಯದಲ್ಲಿ ಕೂಡ ವಾತಾವರಣ ಕಾಂಗ್ರೆಸ್ ಪರವಾಗಿದೆ. ಹೀಗಾಗಿ ಒಗ್ಗಟ್ಟಿನಿಂದ ಇಬ್ಬರು ನಾಯಕರು ಕೆಲಸ ಮಾಡಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಬೇಕು. ಹಾಗಾಗಿ ಇಬ್ಬರಿಗೂ ತಿಳಿ ಹೇಳಿ ಅಂತ ಬಿ.ಕೆ.ಹರಿಪ್ರಸಾದ್, ಕೃಷ್ಣ ಬೈರೇಗೌಡ ಮತ್ತು ರಿಜ್ವಾನ್ ಸೇರಿದಂತೆ ಅನೇಕ ನಾಯಕರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ಗೂ ಕೂಡ ತಿಳಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ ನಲ್ಲಿ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಆಂತರಿಕ ಸಂಘರ್ಷಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚೆ ಮಾಡಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಬಗ್ಗೆಯೂ ಗಂಭೀರವಾಗಿ ಚಿಂತಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಬಣ ರಾಜಕೀಯಕ್ಕೆ ಬ್ರೇಕ್ ಹಾಕ್ತಾರಾ..? ಇಲ್ಲ, ಅದೇ ರಾಗ ಅದೇ ಹಾಡು ಎಂಬಂತೆ ಕಾಂಗ್ರೆಸ್‌ ನಾಯಕರು ವರ್ತಿಸುತ್ತಾರಾ ಎಂಬುದನ್ನ ಕಾದು ನೋಡಬೇಕು.

RELATED ARTICLES

Related Articles

TRENDING ARTICLES