ಪಂಚರಾಜ್ಯ ಚುನಾವಣಾ ಕಣ ಕಾವೇರುತ್ತಿದೆ. UP ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಗೋರಖ್ಪುರ್ ಕ್ಷೇತ್ರದಿಂದ ಸಿಎಂ ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಸಿದ್ರು. ಈ ವೇಳೆ BJPಯ ಘಟಾನುಘಟಿ ನಾಯಕರು ಸಾಥ್ ನೀಡಿದ್ರು.ಏತನ್ಮಧ್ಯೆ ಪ್ರಧಾನಿ ಮೋದಿ ವರ್ಚ್ಯುಯಲ್ ಮೂಲಕ ಪ್ರಚಾರ ನಡೆಸಿದ್ರು.
ಪಂಚರಾಜ್ಯ ಚುನಾವಣೆ ಅಖಾಡ ಕಾವೇರುತ್ತಿದೆ.ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆ ಕಣಕ್ಕೆ ಇಳಿಯುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೋರಖ್ ಪುರ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ರು.ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸಿಎಂ ಯೋಗಿಗೆ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಯೋಗಿ ಆದಿತ್ಯನಾಥ್ ಗೋರಖ್ಪುರದ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅದೇ ದೇಗುಲದಲ್ಲಿ ಪ್ರಧಾನ ಅರ್ಚಕರಾಗಿರುವ ಕಾರಣ ಹವನ ನಡೆಸುವ ಮೂಲಕ ಗಮನ ಸೆಳೆದರು.
ಪೂರ್ವ ಉತ್ತರ ಪ್ರದೇಶದ ಗೋರಖ್‌ಪುರ, ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದ್ದು, ಇಲ್ಲಿಂದ ಐದು ಬಾರಿ ಸಂಸದರಾಗಿ ಗೆಲುವು ಪಡೆದಿದ್ರು. ಹಾಲಿ ಚುನಾವಣೆಗೆ ಗೋರಖ್ಪುರದಿಂದ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಕಣಕ್ಕೆ ಇಳಿದಿದ್ದು, ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
ಈ ಸಲದ ವಿಧಾನಸಭೆ ಚುನಾವಣೆ ಹೊಸ ಇತಿಹಾಸ ಸೃಷ್ಟಿಸಲಿದೆ.ರಾಜ್ಯದಲ್ಲಿನ ಕೈಗಾರಿಕೆಗಳು ಅಭಿವೃದ್ಧಿ ಕಾಣಲು ಬಹುಮುಖ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಗಳು ಬೇಕು ಎಂಬುದನ್ನು ಜನರು ಅರಿತುಕೊಂಡಿದ್ದಾರೆ. ಉತ್ತರ ಪ್ರದೇಶ ಅಭಿವೃದ್ದಿ ಕಾಣಲು ಡಬಲ್ ಇಂಜಿನ್ ಸರ್ಕಾರ ಬೇಕಿದೆ. ಡಬಲ್ ಇಂಜಿನ್ ಸರ್ಕಾರ ಉತ್ತರ ಪ್ರದೇಶದಲ್ಲಿ ಕೊವಿಡ್ ಬಿಕ್ಕಟ್ಟು ಸಮರ್ಥವಾಗಿ ಎದುರಿಸಿತ್ತು. ಕ್ರೀಡೆ, ಉದ್ಯೋಗ ಮತ್ತು ಜನರಿಗೆ ಉಚಿತ ಪಡಿತರ ಆಹಾರವನ್ನು ಯೋಗಿ ಸರ್ಕಾರ ನೀಡಿದೆ.ಉತ್ತರ ಪ್ರದೇಶದ ಪ್ರತಿ ಮನೆಯಲ್ಲೂ ಇದೀಗ ಎಲ್ಪಿಜಿ ಇದೆ ಅಂತಾ ಯೋಗಿ ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಸಮಾವೇಶದಲ್ಲಿ ಫುಲ್ ಮಾರ್ಕ್ಸ್ ನೀಡಿದ್ರು. ಜೊತೆಗೆ ಮೀರತ್, ಗಾಜಿಯಾಬಾದ್, ಅಲಿಗಢ, ಹಾಪುರ್ ಮತ್ತು ನೋಯ್ಡಾದ ಮತದಾರರು ಅಭಿವೃದ್ಧಿಗಾಗಿ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಕರೆ ಕೊಟ್ರು.
ಯುಪಿ ಎಕ್ಸ್ಪ್ರೆಸ್ವೇ ಎಂಬ ಹೆಸರಿನಲ್ಲಿ ಈ ಹಿಂದಿನ ಸರ್ಕಾರಗಳು ರಾಜ್ಯವನ್ನು ಲೂಟಿ ಮಾಡಿವೆ. ಆದ್ರೆ, ಬಿಜೆಪಿ ಉತ್ತಮ ಸಂಪರ್ಕಗಳನ್ನು ಕಲ್ಪಿಸಿದ್ದು, ರಾಜ್ಯದ ಅಭಿವೃದ್ದಿಗೆ ಪಣ ತೊಟ್ಟಿದೆ.ಸಮಾಜವಾದಿ ಪಕ್ಷ ಎಂಬುದು ಪರಿವಾರವಾದಿ ಪಕ್ಷವಾಗಿದೆ. ರಾಜ್ಯದ ಜನರು ದಂಗೆಕೋರರು, ಮಾಫಿಯಾಗಳ ಹಿಡಿತವನ್ನು ಇಷ್ಟ ಪಡುವುದಿಲ್ಲ. ಇದಕ್ಕಾಗಿ ಅವರು ರಾಜ್ಯದಲ್ಲಿ ಹೊಸ ಬದಲಾವಣೆ ನೋಡುತ್ತಿದ್ದಾರೆ. ಸಮಾಜವಾದಿಗಳು ಎಂದಿಗೂ ಬಡವರ, ರೈತರ ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿಲ್ಲ. ಆದ್ರೆ, ನಾವು ರೈತರಿಗೆ 6 ಪಟ್ಟು ಲಾಭವನ್ನು ಹೆಚ್ಚಿಸಿದ್ದೇವೆ. ನಮ್ಮ ಡಬಲ್ ಇಂಜಿನ್ ಸರ್ಕಾರ ರೈತರ ಖಾತೆಗೆ ನೇರವಾಗಿ ಎಂಎಸ್‌ಪಿ ಜಮಾ ಮಾಡುತ್ತಿದೆ. ಆದರೆ, ವಿಪಕ್ಷಗಳು ಈ ಎಂಎಸ್‌ಪಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ವಿಪಕ್ಷಗಳ ವಿರುದ್ಧ ಟೀಕಿಸಿದ್ರು.