ಕಾರವಾರ: ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ಗಾದೆ ನಮ್ಮ ಸರ್ಕಾರಕ್ಕೆ ಸರಿಯಾಗಿಯೇ ಅನ್ವಯಿಸುತ್ತದೆ. ಕೊರೋನ ಪೀಕ್ನಲ್ಲಿದ್ದಾಗ, ಅದರ ಪರಿಣಾಮದ ಬಗ್ಗೆ ಸರಿಯಾಗಿ ತಿಳಿಯದಿದ್ದಾಗಲೇ ಯಾವುದೇ ನಿರ್ಬಂಧ ವಿಧಿಸದೆ, ಇದೀಗ ಕೊರೋನ 3ನೇ ಅಲೆ ಯಾರಿಗೂ ಏನೂ ಮಾಡುವುದಿಲ್ಲ ಎಂದು ಖಚಿತವಾಗಿ ತಿಳಿದ ನಂತರ ಪಾಪದ ಹಳ್ಳಿಗರ ಜಾತ್ರೆಗೆ ನಿರ್ಬಂಧ ಹೇರುವ ಕೆಲಸ ಮಾಡಿದೆ.
ಹೌದು, ಶ್ರೀಮಂತರ ಲಾಬಿಗಳಿಗೆ ಮಣಿದ ಸರ್ಕಾರ, ಹೋಟೆಲ್, ರೆಸಾರ್ಟ್, ಜಿಮ್, ಸ್ವಿಮ್, ಥಿಯೇಟರ್ ಹೀಗೆ ಎಲ್ಲವನ್ನೂ 100% ಓಪನ್ ಮಾಡಿ, ಇದೀಗ ಹಳ್ಳಿಗರ ಇಷ್ಟದ ಜಾತ್ರಾ ಮಹೋತ್ಸವಕ್ಕೆ ನಿರ್ಬಂಧ ವಿಧಿಸುವ ಕೆಲಸ ಮಾಡಿದೆ. ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಈಗ ಸರ್ಕಾರ ನಿರ್ಬಂಧ ವಿಧಿಸಿದೆ. ಫೆಬ್ರವರಿ 7ರಿಂದ 18ರವರೆಗೆ ನಡೆಯುವ ಈ ಜಾತ್ರೆಗೆ ಕೋವಿಡ್ ಮಾರ್ಗಸೂಚಿಯ ಹೆಸರಿನಲ್ಲಿ ತಾಲೂಕ ಆಡಳಿತ ನಿರ್ಬಂಧ ವಿದಿಸಿದೆ. ಹಳ್ಳಿಗರಿಗೆ ಇರುವ ಎರಡೇ ಎರಡು ಸಾರಿಗೆ ವಾಹನಗಳಾದ ಚಕ್ಕಡಿಗಳು, ಟ್ರಾಕ್ಟರ್ಗಳಿಗೆ ನಿರ್ಬಂಧ ಹೇರಲಾಗಿದೆ. ಎರಡು ಡೋಸ್ ಲಸಿಕೆ ಪಡೆಯದವರಿಗೆ ಜಾತ್ರೆಗೆ ನಿರ್ಬಂಧ ಹೇರಲಾಗಿದೆ.
ಸಾರ್ವಜನಿಕರ, ಭಕ್ತಾದಿಗಳ ಆರೋಗ್ಯ ಹಿತದೃಷ್ಟಿಯಿಂದ ಅದ್ದೂರಿ ಜಾತ್ರೆಗೆ ನಿರ್ಬಂಧ ಹೇರಲಾಗಿದೆ ಎಂದು ತಾಲೂಕ ಆಡಳಿತ ಹೇಳಿದೆ. ಜೋಯ್ಡಾ ತಾಲೂಕಿನ ತಹಶೀಲ್ದಾರ್ ಸಂಜಯ್ ಈ ಮಾಹಿತಿ ನೀಡಿದ್ದಾರೆ. ಜಾತ್ರಾ ಮಹೋತ್ಸವವನ್ನು ಸರಳವಾಗಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರನೆ ಮಾಡಲು ದೇವಸ್ಥಾನ ಕಮೀಟಿ ನಿರ್ಧರಿಸಿದೆ.
ಓಂಪ್ರಕಾಶ್ ನಾಯಕ್, ಪವರ್ ಟಿವಿ