ಕರ್ನಾಟಕ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲವೇ ಕೂಡಿ ಬರ್ತಿಲ್ಲ. ಮಂತ್ರಿಗಿರಿ ಆಕಾಂಕ್ಷಿಗಳು, ಸಂಪುಟ ವಿಸ್ತರಣೆ ವಿಳಂಬಕ್ಕೆ ಆಕ್ರೋಶ ಹೊರಹಾಕ್ತಿದ್ದಾರೆ. ಸಂಪುಟ ವಿಸ್ತರಣೆ ಮಾಡೋದಕ್ಕಿಂತ ಪುನಾರಚನೆಯನ್ನ ಮಾಡಿ ಅಂತ ವರಿಷ್ಠರ ಮೇಲೆ ಒತ್ತಡ ತರ್ತಿದ್ದಾರೆ. ಅದ್ರಲ್ಲೂ ಕೆಲ ಶಾಸಕರಂತೂ ಹಿರಿಯರನ್ನ ಕೈಬಿಟ್ಟು, ಹೊಸಬರಿಗೆ ಅವಕಾಶ ಮಾಡಿಕೊಡಿ ಅಂತ ದುಂಬಾಲು ಬಿದ್ದಿದ್ದಾರೆ.
ಮಂತ್ರಿಗಿರಿ ಆಕಾಂಕ್ಷಿಗಳು ದಿನ ಬೆಳಗಾದ್ರೆ ಸಿಎಂ ನಿವಾಸಕ್ಕೆ ಎಡತಾಕ್ತಿದ್ದಾರೆ. ಶಾಸಕರ ಒತ್ತಾಯಕ್ಕೆ ಸಿಎಂ ಕೂಡ ಹೈರಾಣಾಗಿದ್ದಾರೆ. ವರಿಷ್ಠರ ಭೇಟಿಗೆ ಕಳೆದ ತಿಂಗಳಿಂದ್ಲೂ ನಿರಂತರ ಪ್ರಯತ್ನ ಮಾಡ್ತಿದ್ದಾರೆ. ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಇನ್ನೂ ವರಿಷ್ಠರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಆದ್ರೆ, ಸೋಮವಾರ ದೆಹಲಿಗೆ ಸಿಎಂ ಪ್ರಯಾಣ ಬೆಳೆಸ್ತಿದ್ದಾರೆ. ದೆಹಲಿಗೆ ತೆರಳಿ ಬಿ.ಎಲ್.ಸಂತೋಷ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನ ಮುಂದಿಟ್ಟುಕೊಂಡು ಅಮಿತ್ ಶಾ ಹಾಗೂ ನಡ್ಡಾ ಭೇಟಿಗೆ ಪ್ರಯತ್ನ ನಡೆಸಲಿದ್ದಾರೆ.
ಒಂದು ವೇಳೆ ಅವಕಾಶ ಸಿಕ್ಕರೆ ಪುನಾರಚನೆಯ ಬಗ್ಗೆ ಚರ್ಚಿಸಲಿದ್ದಾರೆ. ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಪುನಾರಚನೆಯನ್ನ ಮಾಡಿ ಮುಗಿಸಲಿದ್ದಾರೆ.
ಸಂಪುಟ ವಿಸ್ತರಣೆ ಮಾಡಿದ್ರೆ ನಾಲ್ವರಿಗೆ ಅವಕಾಶ ಸಿಗಲಿದೆ. ಆದ್ರೆ ಪುನಾರಚನೆಗೆ ವರಿಷ್ಠರು ಇಚ್ಚಾಶಕ್ತಿ ತೋರಿದ್ರೆ, ಈಶ್ವರಪ್ಪ, ಪ್ರಭು ಚೌವ್ಹಾಣ್, ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆಯನ್ನ ಕೈಬಿಡುವ ಸಾಧ್ಯತೆಯಿದೆ. ಈ ಮೂಲಕ 10 ರಿಂದ 11 ಹೊಸ ಶಾಸಕರಿಗೆ ಅವಕಾಶ ನೀಡಬಹುದು. ಇದ್ರಿಂದಾಗಿ ಬೊಮ್ಮಾಯಿ 11 ಮಂದಿಯ ಪಟ್ಟಿಯನ್ನ ರೆಡಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಬೆಲ್ಲದ್, ಯತ್ಬಾಳ್, ತಿಪ್ಪಾರೆಡ್ಡಿ, ರಾಮದಾಸ್, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ದತ್ತಾತ್ರೇಯ ಪಾಟೀಲ್, ರಾಜ್ ಕುಮಾರ್ ಸೇಡಂ, ರಮೇಶ್ ಜಾರಕಿಹೊಳಿ, ರೇಣುಕಾಚಾರ್ಯ, ರಾಜುಗೌಡ, ಕುಡುಚಿ ರಾಜೀವ್, ಎಂ.ಪಿ.ಕುಮಾರಸ್ವಾಮಿ ಹಾಗೂ ಕುಮಟಳ್ಳಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.. ಇವರ ನಂತರ ಇನ್ನೂ ನಾಲ್ಕೈದು ಹೊಸ ಶಾಸಕರು ನಮಗೂ ಸಚಿವ ಸ್ಥಾನ ಬೇಕು ಎಂಬ ಬೇಡಿಕೆ ಇಡ್ತಿದ್ದಾರೆ.
ಈ ನಡುವೆ ಮಂತ್ರಿಗಿರಿ ಆಕಾಂಕ್ಷಿಗಳ ಆಕ್ರೋಶದ ಕಟ್ಟೆ ಹೊಡೆದಿದೆ.. ಯತ್ನಾಳ್ ಹಾಗೂ ರೇಣುಕಾಚಾರ್ಯ ಸೇರಿ ಹಲವು ಶಾಸಕರು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಹೆಚ್.ವಿಶ್ವನಾಥ್ ತೀವ್ರ ಆಕ್ರೋಶವನ್ನೇ ಹೊರಹಾಕಿದ್ದು, ಹೊಸಬರಿಗೆ ಅವಕಾಶ ಕೊಡುವಂತೆ ಒತ್ತಾಯ ಮಾಡಿದ್ರೆ, ಶಾಸಕ ರೇಣುಕಾಚಾರ್ಯ ನನಗೆ ಅನುಭವ ಇದೆ ಸಚಿವ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇಷ್ಟೆಲ್ಲಾ ಆಕಾಂಕ್ಷಿಗಳ ನಡುವೆ ಬಿ.ವೈ. ವಿಜಯೇಂದ್ರರ ಹೆಸರೂ ಪಟ್ಟಿಯಲ್ಲಿದೆ.. ಅವಕಾಶ ಕೊಡ್ಲೇಬೇಕು ಅಂತ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಆದ್ರೆ, ಸಂತೋಷ್ ಹಾಗೂ ಕಟೀಲ್ ಒಪ್ಪಿಗೆ ಅನಿವಾರ್ಯವಿದೆ. ಇವರು ಒಪ್ಪಿದರೆ ಕೊನೆಯ ಕ್ಷಣದಲ್ಲಿ ವಿಜಯೇಂದ್ರ ಎಂಟ್ರಿಯಾದರೂ ಅಚ್ಚರಿಯಿಲ್ಲ.
ಸಂಸದರ ಸಭೆ ನೆಪದಲ್ಲಿ ಸಿಎಂ ಸೋಮವಾರ ದೆಹಲಿಗೆ ಹೋಗ್ತಿದ್ದಾರೆ. ಅಲ್ಲಿ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸ್ತಿದ್ದಾರೆ. ಅವಕಾಶ ಸಿಕ್ಕರೆ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ. ಇಲ್ಲದೇ ಹೋದ್ರೆ ಯಾವುದೂ ಇಲ್ಲ. ಇನ್ನು, ಸಿಎಂ ಪ್ರವಾಸಕ್ಕೂ ಮೊದಲೇ ಸಚಿವ ಶ್ರೀರಾಮುಲು ದೆಹಲಿಗೆ ತೆರಳಿರೋದು ಕುತೂಹಲ ಮೂಡಿಸಿದೆ.