ನವದೆಹಲಿ: ಇದು ಉಪ್ಪು,ಹುಳಿ, ಖಾರ ಏನು ಇಲ್ಲದ ಬಜೆಟ್ ಎಂದು ದೆಹಲಿಯಲ್ಲಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದರೆ ಬಹುಶಃ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ರವರಿಗೆ ಭಾರತದ ಜನತೆ ಖಾರ ತಿಂದು ತಿಂದು ಅಸಿಡಿಟಿಯಿಂದ ಬಳಲುತ್ತಿರುವುದು ಗೊತ್ತಿರಬೇಕು. ಅದಕ್ಕೆ ಉಪ್ಪು ಹುಳಿ ಖಾರ ಇಲ್ಲದ ಬಜೆಟ್ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಬಜೆಟ್ಟನ್ನು ಸಮರ್ಥನೆ ಮಾಡಿಕೊಳ್ಳಬಹುದು.
ಇರಲಿ, ಬಜೆಟ್ನಲ್ಲಿ ಯಾವುದೇ ರುಚಿಯಿಲ್ಲ ಎಂದು ಮುಖ ಕಿವುಚಿ ಹೇಳಿರುವ ಸಂಸದ ಡಿ.ಕೆ.ಸುರೇಶ್, ಬಡವರಿಗೆ, ಮಧ್ಯಮ ವರ್ಗಕ್ಕೆ ಇದರಲ್ಲಿ ಏನೂ ಕೊಟ್ಟಿಲ್ಲ. ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ಕೊಡುತ್ತಾರಂತೆ. ಇಂಥ ಕೆಟ್ಟ ಬಜೆಟ್ ಬಗ್ಗೆ ಚರ್ಚೆ ಮಾಡಲೂ ಸಹ ಏನೂ ಇಲ್ಲ. ದೇಶದಲ್ಲಿಯ ನಿರುದ್ಯೋಗವನ್ನು ಪ್ರಧಾನಿ ಒಪ್ಪಿಕೊಂಡಂತೆ ಆಗಿದೆ. 39 ಲಕ್ಷ ಕೋಟಿ ಬಜೆಟ್ ಅಂತಾರೆ, ತೆರಿಗೆಯಿಂದಲೇ 24 ಲಕ್ಷ ಕೋಟಿ ಬರುತ್ತೆ. ಆದರೆ ಈ ಬಜೆಟ್ನಿಂದಾಗಿ ಭಾರತೀಯರು ಮತ್ತೆ ಸಾಲಗಾರರಾಗುವಂತಾಗಿದೆ. ಕೃಷ್ಣ ಮೇಲ್ದಂಡೆ, ರೈಲು ಯೋಜನೆಗಳಿಗೆ ಹಣ ಸಿಕ್ಕಿಲ್ಲ, ಮಹದಾಯಿ ವಿಚಾರವಾಗಿ ಚರ್ಚೆ ಆಗಿಲ್ಲ. ಇದು ಬರೀ ಸುಳ್ಳು ಭರವಸೆಗಳ ಬಜೆಟ್ ಎಂದು ಡಿ.ಕೆ.ಸುರೇಶ್ ಟೀಕಿಸಿದ್ದಾರೆ.