Wednesday, January 22, 2025

‘ಬಣ್ಣ ಬಣ್ಣದ ಜಾಹೀರಾತು ನೀಡಿ ಸುಳ್ಳು ಹೇಳಿದ ಸರ್ಕಾರ’

ಬೆಂಗಳೂರು : ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಆರು ತಿಂಗಳು ಭರ್ತಿಯಾಗಿತ್ತು. ಹೀಗಾಗಿ ಸರ್ಕಾರದ ಸಾಧನೆ ಕುರಿತು ಸಿಎಂ ಪುಸ್ತಕ ಬಿಡುಗಡೆ ಮಾಡಿದ್ರು. ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಹಳೆ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿದ್ದೆ ಸಾಧನೆ ಅಂತ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಸಿದ್ದು ಆರೋಪಕ್ಕೆ ಸಚಿವ ಆರ್‌.ಅಶೋಕ್‌ ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷ ಪೂರೈಸಿದೆ. ಅದರಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಆರು ತಿಂಗಳು ಪೂರೈಸಿದ್ದಾರೆ. ಯಡಿಯೂರಪ್ಪ ಮಂಡಿಸಿದ ಬಜೆಟ್ ಮತ್ತು ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆ ಭರವಸೆ ಇದ್ಯಾವುದನ್ನೂ ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ. ಕೇವಲ ಬಣ್ಣ ಬಣ್ಣದ ಜಾಹೀರಾತು ಮತ್ತು ಮುಂದಿನ ಸರ್ಕಾರದ ಭರವಸೆಗಳನ್ನು ನೀಡಿ ಬೊಮ್ಮಾಯಿ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯುವುದೇ ವಿಶೇಷ ಕಾರ್ಯಕ್ರಮಗಳನ್ನು ನೀಡಿಲ್ಲ. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿಲ್ಲ. ಕೊರೋನಾ ಸಂದರ್ಭದಲ್ಲಾದ ರೈತರ ನಷ್ಟಕ್ಕೆ ಪರಿಹಾರ ಕೊಟ್ಟಿಲ್ಲ. ಬೆಡ್, ಆಕ್ಸಿಜನ್, ವೆಂಟಿಲೇಟರ್ ನೀಡದೆ ಲಕ್ಷಾಂತರ ಜನರ ಕೊರೋನಾಗೆ ಸತ್ರು. ಸತ್ತವರಿಗೆ ಒಂದು ಲಕ್ಷ ಪರಿಹಾರ ನೀಡುತ್ತೇವೆ ಅಂದ್ರು. ಅದನ್ನು ಸಮರ್ಪಕವಾಗಿ ಕೂಡ ಕೊಟ್ಟಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿವೆ. ಅದನ್ನು ಕಂಟ್ರೋಲ್ ಮಾಡಲಿಲ್ಲ. ಒಟ್ಟಾರೆಯಾಗಿ ಬಿಜೆಪಿ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲಾಗಿದೆ ಅಂತ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ರು.

ಇನ್ನೂ ರಾಜ್ಯದ ನೀರಾವರಿ ಯೋಜನೆಗಳನ್ನು ಈ ಸರ್ಕಾರ ಜಾರಿಗೆ ತಂದಿಲ್ಲ. ಮೇಕೆದಾಟು ನೋಟಿಫಿಕೇಶನ್ ಆಗಿಲ್ಲ. ಅಪ್ಪರ್ ಕೃಷ್ಣಾ ಯೋಜನೆ ನೋಟಿಫಿಕೇಶನ್ ಆಗಿಲ್ಲ. ಮಹದಾಯಿ ಯೋಜನೆಗೆ ನೋಟಿಫಿಕೇಶನ್ ಆಗಿಲ್ಲ. ಮೇಕೆದಾಟು ಯೋಜನೆ ಜಾರಿ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಗೋವಾದಲ್ಲಿ ಕೂಡ ಬಿಜೆಪಿ ಸರ್ಕಾರ ಇದೆ. ಹೀಗಿದ್ರೂ ಮಹದಾಯಿ ಯೋಜನೆ ಜಾರಿ ಮಾಡುತ್ತಿಲ್ಲ. ಅತ್ತ ಡಿಪಿಆರ್ ರೆಡಿ ಇರುವ ಮೇಕೆದಾಟಿಗೂ ಕೂಡ ಅಡ್ಡಗಾಲು ಹಾಕಲಾಗಿದೆ. ಹಾಗಿದ್ರೆ ಡಬಲ್ ಇಂಜಿನ್ ಸರ್ಕಾರ ಮಾಡಿದ ಸಾಧನೆಯಾದ್ರೂ ಏನು..? ಇದನ್ನು ಜನರ ಮುಂದೆ ತೆರದಿಡಬೇಕು. ಕೇವಲ ಭರವಸೆ ನೀಡುವುದು ಸರ್ಕಾರದ ಕೆಲಸವಾಗಿದೆ ಅಂತ ಸಿದ್ದರಾಮಯ್ಯ ಹರಿಹಾಯ್ದರು.

ಸರ್ಕಾರದ ಸಾಧನೆಗಳ ವಿರುದ್ಧ ವ್ಯಂಗ್ಯ ಮಾಡಿದ ಸಿದ್ದರಾಮಯ್ಯ, ವಿರುದ್ಧ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ರು. ಸಿದ್ದರಾಮಯ್ಯ ಸರ್ಕಾರ ಹಾಗೂ ಬಿಜೆಪಿ ಬಗ್ಗೆ ಮಾತನಾಡುವ ಚಟ ಇದೆ. ಏನೇ ಇದ್ರೂ ಟೀಕೆ ಮಾಡುತ್ತಲೆ ಇರ್ತಾರೆ. 78 ಶಾಸಕರಿದ್ದವರಲ್ಲಿ ಹದಿನೈದು ಜನರು ಬಿಟ್ಟು ಬಂದ್ರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಶೋ ನಡೆಯುತ್ತಿದೆ. ದರ್ಶಿನಿ ಹೊಟೇಲ್‌ನಲ್ಲಿ ಟುಡೇ ಸ್ಪೇಷಲ್ ತರ ಮೇನು ಹಾಕಿಕೊಂಡು ಇಬ್ಬರು ಮಾತನಾಡುತ್ತಿದ್ದಾರೆ. ಇವರ ನಡುವೆ ನಾಯಕತ್ವ ಪೈಪೋಟಿ ನಡೆದಿದೆ ಅಂತ ಅಶೋಕ್ ಕಿಚಾಯಿಸಿದ್ರು.

ಈ ಮಧ್ಯೆ, ಡಿಕೆಶಿ ಸಂಪತ್‌ ರಾಜ್‌ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಪುಲಕೇಶಿನಗರ ಟಿಕೆಟ್‌ ವಿಚಾರವಾಗಿ ಹಾಗು ಅಖಂಡ ಶ್ರೀನಿವಾಸ್‌ ಪರ ಕೆಲಸ ಮಾಡ್ತಿರೋದಕ್ಕೆ ಗರಂ ಆಗಿದ್ದು, ಸಿದ್ದು, ಅಶೋಕ್‌ ಪಟ್ಟಣ್, ನಡುವೆ ಬಿಸಿಬಿಸಿ ಚರ್ಚೆಯಾಗಿದೆ. ಸುದ್ದಿಗೋಷ್ಠಿಗೂ ಮೊದಲು ಸಿದ್ದು, ಅಶೋಕ್‌ ಪಟ್ಟಣ್ ಗುಸುಗುಸು ಮಾತು ವೈರಲ್‌ ಆಗ್ತಿದೆ. ಇದ್ರ ಜೊತೆಗೆ, ಡಿಕೆಶಿ ವಿರುದ್ಧ ಅಸಮಾಧಾನ ಇರೋದು ಬಹಿರಂಗವಾಗಿದೆ.

ಸರ್ಕಾರದ ಅಭಿವೃದ್ಧಿ ವಿಚಾರಗಳ ವಿಚಾರವಾಗಿ ಕಾಂಗ್ರೆಸ್‌ ಕಿಡಿಕಾರುತ್ತಿದೆ.. ಆದ್ರೆ, ತಮ್ಮ ಪಕ್ಷದಲ್ಲೇ ಆಂತರಿಕ ಭಿನ್ನಮತ ವಿಚಾರವನ್ನು ಬಹಿರಂಗ ಪಡಿಸಿಕೊಳ್ಳುವ ಮೂಲಕ ಬಿಜೆಪಿ ನಾಯಕರ ಬಾಯಿಗೆ ಕೈ ನಾಯಕರು ಆಹಾರವಾಗ್ತಿರೋದಂತೂ ಸತ್ಯ.

RELATED ARTICLES

Related Articles

TRENDING ARTICLES