ಹಾಸನ: ಯಡಿಯೂರಪ್ಪನವರು ದ್ವೇಷದ ರಾಜಕೀಯ ಮಾಡೋಲ್ಲ ಎಂದಿದ್ದರು. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಕಾಂಗ್ರೆಸ್ ಅಧಿಕಾರ ಮಾಡಿವೆ. ಹಾಸನ ಜಿಲ್ಲೆಯ ಅಭಿವೃದ್ಧಿಗೆ ಈ ಎರಡೂ ಪಕ್ಷಗಳ ಕೊಡುಗೆ ಶೂನ್ಯ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಸನನಗರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಕೇಂದ್ರ ಸ್ಥಾನ. ಯಾವುದೋ ಒಂದು ಕ್ಷೇತ್ರದ ನಗರವಲ್ಲ. ಜಿಲ್ಲೆಯ ಎಲ್ಲಾ ಕಾಮಗಾರಿಗಳ ಕುಂಠಿತಕ್ಕೆ ಯಡಿಯೂರಪ್ಪನವರೇ ಕಾರಣ ಎಂದು ಅವರು ಆರೋಪ ಮಾಡಿದರು.
ಅದುವಲ್ಲದೇ, ಕಳೆದ ಬಾರಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಆ ಸಂದರ್ಭ ರಾಜ್ಯಸಭಾ ಚುನಾವಣೆ ವೇಳೆ ದುಡ್ಡು ಕೊಟ್ಟು ಓಟು ಹಾಕಿಸಿಕೊಂಡರು. 2023ಕ್ಕೆ ಜೆಡಿಎಸ್ ಒಂದು ಶಕ್ತಿಯಾಗಿ ಹೊರಹೊಮ್ಮಲಿದೆ. ಈ ಎರಡೂ ರಾಜಕೀಯ ಪಕ್ಷಗಳಿಗೆ ಎದುರಾಗಿ ನಿಲ್ಲುವುದು ನಿಶ್ಚಿತ. ನಾನು ದೇವರಲ್ಲಿ ನಂಬಿಕೆ ಇಟ್ಟಿರುವವನು. ನಾವು ಉತ್ತಮ ಸಾಧನೆ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ನಮ್ಮ ಬಸ್ಸು ಖಾಲಿ ಇದೆ ಎಂದು ಕಾಂಗ್ರೆಸ್ ಬಿಜೆಪಿ ನವರು ಕರೆಯುತ್ತಿದ್ದಾರೆ. ನಾವು ಹೋಗುವವರನ್ನ ಹಿಡಿದುಕೊಳ್ಳೋದಿಲ್ಲ. ನಾನು ಯಾರನ್ನೂ ನಮ್ಮ ಬಸ್ಸು ಹತ್ತಿ ಎಂದು ಕೇಳೋದಿಲ್ಲ. ಕಳೆದ ಬಾರಿ 17 ಜನ ಹೋಗಬೇಕಾದ್ರೂ ಟಿಕೆಟ್ ದರ ಪಾವತಿಸಿ ಕರೆದುಕೊಂಡು ಹೋಗಿಲ್ವಾ(?) ನಮ್ಮ ಬಳಿ ಬಸ್ಸು, ವಿಮಾನ ಇಲ್ಲ, ನಾವು ಆ ಕೆಲಸಕ್ಕೆ ಹೋಗೋದಿಲ್ಲ. ಅರವತ್ತು ವರ್ಷ ಕಾಂಗ್ರೆಸ್ ಇದ್ದರೂ ಏಕೆ ಯೋಜನೆ ರೂಪಿಸಲಿಲ್ಲ? ಈ ಬಗ್ಗೆ ನಾನೊಬ್ಬನಲ್ಲ ತಜ್ಞರು ಇದೇ ಅಭಿಪ್ರಾಯ ಹೇಳಿದ್ದಾರೆ ಎಂದರು.
ಇನ್ನು ನೀರಾವರಿ ಯೋಜನೆಗಾಗಿ ದೇವೇಗೌಡರು ಏನು ಕಾರ್ಯಕ್ರಮ ನೀಡಿದ್ದಾರೆ ಎಲ್ಲರಿಗೂ ಗೊತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಜನರ ಬಳಿ ಹೋಗಲಿ ಎಂದು ಸವಾಲು. ಕಾವೇರಿ ಜಲಾನಯನ ಪ್ರದೇಶಕ್ಕೆ ಮೋಸ ಆಗಿದ್ರೆ ಅದು ಕಾಂಗ್ರೆಸ್ನಿಂದ. ಯುಪಿಎ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮೋಸವಾಗಿದೆ. ಕಳೆದ ಬಾರಿ ಕೃಷ್ಣಾ ನಡೆ ಅಂದ್ರು ಏನಾಯ್ತು? ವರ್ಷಕ್ಕೆ 10 ಸಾವಿರ ಕೋಟಿ ಖರ್ಚು ಮಾಡ್ತೀವಿ ಎಂದಿದ್ದರು ಮಾಡಿದ್ರಾ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ.