Sunday, November 3, 2024

ಮಂಗಳನ ಅಂಗಳದಲ್ಲಿ ಪತ್ತೆಯಾಯ್ತು ಟ್ರ್ಯಾಕ್​

ಈ ಜಗತ್ತಿನಲ್ಲಿ ಭೂಮಿಯನ್ನ ಬಿಟ್ಟು ಬೇರೆ ಯಾವುದಾದರೂ ಗ್ರಹ ಮಾನವನ ವಾಸಕ್ಕೆ ಸಾಧ್ಯವಾಗುತ್ತೆ ಅಂದರೆ ಅದು ಮಂಗಳ ಮಾತ್ರ. ಆದರೆ ಈಗ ಮಂಗಳ ಗ್ರಹ ಅಷ್ಟು ಸುಲಭವಾಗಿ ಮಾನವನ ವಾಸಕ್ಕೆ ಯೋಗ್ಯವಾಗಿಲ್ಲ. ಯಾಕೆಂದರೆ ಮಂಗಳನ ಅಂಗಳದಲ್ಲಿ ಮಾನವನಿಗೆ ಅವಶ್ಯವಾದಷ್ಟು ಆಕ್ಸಿಜನ್​ ಇಲ್ಲ, ಜೀವ ಸಂಕುಲದ ಉಳಿವಿಗೆ ಮುಖ್ಯವಾಗಿ ಬೇಕಾಗಿರುವ ನೀರಿನ ಅಂಶ ಅಲ್ಲಿಲ್ಲ. ಜೊತೆಗೆ ಇದೆಲ್ಲಕ್ಕಿಂತ ಮುಖ್ಯವಾಗಿ ಮಂಗಳ ಗ್ರಹ ಭೂಮಿಯಷ್ಟು ತಾಪಮಾನವನ್ನ ಹೊಂದಿಲ್ಲ. ಹೀಗಾಗಿ ಮಂಗಳನಲ್ಲಿ ಮಾನವ ವಾಸಸ್ಥಾನವನ್ನ ನಿರ್ಮಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ.

ವಿಜ್ಞಾನಿಗಳು ಹೇಳುವ ಪ್ರಕಾರ ಮಂಗಳ ಗ್ರಹದಲ್ಲಿನ ತಾಪಮಾನವನ್ನ ಹೆಚ್ಚಿಸಲೇ ಬೇಕಾಗಿದೆ, ಇವತ್ತು ಭೂಮಿ ಹೇಗೆ ಜಾಗತಕ ತಾಪಮಾನದ ಬಗ್ಗೆ ಭಯ ಪಡ್ತಿದ್ಯೋ ಅದರ ಎರಡು ಪಟ್ಟು ಹೆಚ್ಚು ತಾಪಮಾನವನ್ನ ಮಂಗಳನಲ್ಲಿ ಹೆಚ್ಚಿಸಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ಜಗತ್ತಿನ ಅತಿ ಸಿರಿವಂತ ವ್ಯಕ್ತಿ ಹಾಗು ಉದ್ಯಮಿ ಎಲಾನ್​ ಮಸ್ಕ್​ ಕೂಡ ಇದೇ ರೀತಿಯಾದ ಹೇಳಿಕೆಯನ್ನ ನೀಡಿದ್ದರು. ಅವರ ಪ್ರಕಾರ ಇವತ್ತು ಭೂಮಿಯಲ್ಲಿರುವ ಎಲ್ಲಾ ಅಣು ಬಾಂಬ್​ಗಳನ್ನ ಕೊಂಡೊಯ್ದು ಮಂಗಳನಲ್ಲಿ ಸಿಡಿಸಿದರು ಕೂಡ ಮಂಗಳ ಇನ್ನಷ್ಟು ಬಿಸಿಯಾಗುವ ಅವಶ್ಯಕತೆ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಕಳೆದ ಒಂದು ದಶಕದಿಂದ ಮಂಗಳನಲ್ಲಿ ಮಾನವ ನೆಲೆ ಸ್ಥಾಪಿಸುವ ಕುರಿತು ತೀವ್ರ ಸ್ವರೂಪದ ಚರ್ಚೆಯನ್ನ ನಡೆಸಲಾಗುತ್ತಿದೆ. ಈ ಯೋಜನೆಯಲ್ಲೂ ಕೂಡ ಎಲಾನ್​ ಮಸ್ಕ್ ಅವರ​ ಬಹುಮುಖ್ಯವಾದ ಪಾತ್ರವಿದೆ.. ಹೀಗಾಗಿ ಈ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನಗಳನ್ನ ಎಲಾನ್​​ ಮಸ್ಕ್​ ನೇತೃತ್ವದ ಸ್ಪೇಸ್​ ಎಕ್ಸ್​ ಸಂಸ್ಥೆ ಮಾಡಿಕೊಂಡು ಬಂದಿದೆ. ಆದರೆ, ಮಂಗಳನಲ್ಲಿ ಮಾನವ ತೆರಳುವ ಅಧ್ಯಯನಕ್ಕೆ ಹೇಳಿಕೊಳ್ಳುವಂತ ಯಶಸ್ಸುಗಳು ಮಾತ್ರ ಇದುವರೆಗೆ ಸಿಕ್ಕಿಲ್ಲ. ಅದೂ ಅಲ್ಲದೇ ಮಂಗಳ ಗ್ರಹ ಸಾಕಷ್ಟು ದೂರದಲ್ಲಿ ಇರುವುದರಿಂದ ಇಲ್ಲಿಗೆ ತೆರಳೋದಕ್ಕೆ ಸುಮಾರು ಒಂದು ವರ್ಷಗಳ ಅವಧಿಯಾದರೂ ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೆ ಮಾನವನ ವಾಸಕ್ಕೆ ಬೇಕಾದ ಉಪಯುಕ್ತ ವಸ್ತುಗಳನ್ನ ಕೂಡ ಒದಗಿಸಬೇಕಾದ ಅವಶ್ಯಕತೆ ಇದೆ. ಹಾಗಾಗಿ ಇದುವರೆಗೂ ಮಾನವನಿಂದ ಮಂಗಳನ ಅಂಗಳಕ್ಕೆ ಕಾಲಿಡಲು ಸಾಧ್ಯವಾಗಿಲ್ಲ.

ಮಾನವ ಇದುವರೆಗೂ ಪತ್ತೆಯಾಗದ ಅಂಗಾರಕನಲ್ಲಿ ಬರೋಬ್ಬರಿ 900 ಕಿ.ಮೀ. ಉದ್ದದ ಟ್ರ್ಯಾಕ್‌ನಂಥ ಗುರುತುಗಳು ಪತ್ತೆಯಾಗಿದ್ದು, ಇದು ಜನಸಾಮಾನ್ಯರ ಅಚ್ಚರಿಗೆ ಕಾರಣವಾಗಿದೆ. ಸದ್ಯಕ್ಕೆ ಮಂಗಳ ಗ್ರಹದಲ್ಲಿ ಕ್ಯೂರಿಯಾಸಿಟಿ ಮತ್ತು ಪರ್ಸೆವೆರನ್ಸ್‌ ರೋವರ್‌ಗಳು ಮಾತ್ರವೇ ಚಲಿಸುತ್ತಾ ಇದ್ವು. ಇವುಗಳು ಇಷ್ಟು ದೊಡ್ಡದಾದ ಟ್ರ್ಯಾಕ್​ ಅನ್ನ ಸೃಷ್ಟಿಸೋದಕ್ಕೆ ಸಾಧ್ಯವಿಲ್ಲ ಅನ್ನೋದು ಎಂಥವರಿಗಾದ್ರು ಅರ್ಥವಾಗುತ್ತೆ. ಹಾಗಾಗಿ ಸುತ್ತ ಪತ್ತೆಯಾಗಿರುವ ಗುರುತುಗಳು ಈ ನೌಕೆಗಳಿಂದ ಬಂದಿರೋದು ಅಲ್ಲ ಅನ್ನೋದನ್ನ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ನಾಸಾ ಹಾರಿಸಿದ್ದ ಮಾರ್ಸ್‌ ರಿಕೊನೈಸನ್ಸ್‌ ಆರ್ಬಿಟರ್‌ ಉಪಗ್ರಹದಲ್ಲಿ ಅಳವಡಿಲಾಗಿದ್ದ, ಹೈ-ರೆಸಲ್ಯೂಷನ್‌ ಇಮೇಜಿಂಗ್‌ ಸೈನ್ಸ್‌ ಎಕ್ಸ್‌ಪೆರಿಮೆಂಟ್‌ ಕ್ಯಾಮೆರಾ ಈ ಫೋಟೋಗಳನ್ನ ತೆಗೆದಿದ್ದು, 2006ದಿಂದ 2020ರ ವರೆಗೆ ಮಂಗಳನಲ್ಲಿ ಮೂಡಿರುವ ಈ ಗುರುತುಗಳನ್ನು ಪತ್ತೆಹಚ್ಚಿದೆ. ಹಾಗಾಗಿ ಈ ಬಗ್ಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು, ಮಂಗಳನಲ್ಲಿ ಭೂಕಂಪನ ಚಟುವಟಿಕೆಗಳು ಅಧಿಕವಿರುವ ಸೆರ್ಬೆರಸ್‌ ಫೊಸಾಯಿ’ ವಲಯದಲ್ಲಿ ಈ ಗುರುತುಗಳು ಪತ್ತೆಯಾಗಿದ್ದು, ಈ ರೀತಿಯಾದ ಸುಮಾರು 4500ಕ್ಕೂ ಅಧಿಕ ಗುರುತುಗಳು ಪತ್ತೆಯಾಗಿವೆ ಅಂತ ಹೇಳಿದ್ದಾರೆ. ಇನ್ನು ಈ ರೀತಿಯಾದ ಭೂಕಂಪನದ ಪಲ್ಲಟಗಳಿಂದ ಶಿಲಾಖಂಡಗಳು ಉರುಳುತ್ತವೆ. ಈ ವೇಳೆಯಲ್ಲಿ ಈ ಟ್ರ್ಯಾಕ್​ ನಿರ್ಮಾಣವಾಗಿರುವ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ಹೇಳಿಕೆಯನ್ನ ನೀಡಿದ್ದಾರೆ. ಅದು ಅಲ್ಲದೆ ಈ ಟ್ರ್ಯಾಕ್​ಗಳು ಮಂಗಳನಲ್ಲಿನ ನಾಲ್ಕು ವರ್ಷಗಳಲ್ಲಿ, ಅಂದ್ರೆ ಭೂಮಿಗಳ ಅವಧಿಯಲ್ಲಿ ಅಳಿಸಿ ಹೋಗಲಿದೆ ಅಂತ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಮಂಗಳನಲ್ಲಿ ಪತ್ತೆಯಾಗಿರುವ ಈ ಟ್ರ್ಯಾಕ್​ ಬಗ್ಗೆ ಹಲವು ಗಾಳಿಸುದ್ಧಿ ಹಬ್ಬಿದ್ದು, ಇದು ಏಲಿಯನ್​ಗಳ ಇರುವಿಕೆಯ ಗುರುತಿರಬಹುದು ಎಂದು ಇಲ್ಲಸಲ್ಲದ ಸುದ್ಧಿಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ವಿಜ್ಞಾನ ಲೋಕ ಸ್ಪಷ್ಟಪಡಿಸಿದ್ದು, ಇನ್ನು ಮುಂದೆಯಾದರೂ ಈ ರೀತಿಯಾದ ಊಹಾಪೋಹದ ಸುದ್ಧಿಗಳು ಹರಡದೇ ಇರಲಿ ಅನ್ನೋದೇ ಎಲ್ಲರ ಆಶಯವಾಗಿದೆ.

RELATED ARTICLES

Related Articles

TRENDING ARTICLES