ಗದಗ: ಸೋಮವಾರ ನಡೆಯುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಗೆದ್ದು, ಗದುಗಿನ ಗದ್ದುಗೆ ಏರಲು ಸನ್ನದ್ಧಗೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧ ಗದಗ-ಬೆಟಗೇರಿ ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಮೋಹನ್‌ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಅವರು ತಮ್ಮ ಹೆಸರನ್ನು ಗದಗ ವಿಧಾನಸಭಾ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವುದಕ್ಕೆ ಅವಳಿ ನಗರದ ಜನತೆ ಕೈ ನಾಯಕರ ವಿರುದ್ಧ ಹರಿಹಾಯುತ್ತಿದ್ದಾರೆ.
ಅದರಲ್ಲೂ,ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ನ ಮೂವರು ಮೇಲ್ಮನೆ ಸದಸ್ಯರ ವಿರುದ್ಧ ನಗರದ ಜನರು ಪ್ರಶ್ನೆಗಳ ಸುರಿಮಳೆಗೈದಿದ್ದಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಗದಗ-ಬೆಟಗೇರಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ ನಾಯಕರು ಇಷ್ಟೆಲ್ಲ ಕಸರತ್ತು ನಡೆಸುತ್ತಿದ್ದು, ಭಾರೀ ಕುತೂಹಲ ಕೆರಳಿಸಿದೆ. ಸಂಖ್ಯಾಬಲದಲ್ಲಿ ಸ್ವಲ್ಪವಷ್ಟೇ ಅಂತರವಿರುವ ಕಾರಣ, ಸೋಮವಾರದ ಚುನಾವಣೆಯಲ್ಲಿ ಯಾವ ತಂತ್ರದ ಮೂಲಕ ಯಾರು ಅಧಿಕಾರ ಹಿಡಿಯುತ್ತಾರೆ ಎನ್ನುವುದು ಕಷ್ಟ. ಕಾಂಗ್ರೆಸ್, ಬಿಜೆಪಿ ಮಧ್ಯೆ ಅಧಿಕಾರಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದು ಸೋಮವಾರ ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಗೊತ್ತಾಗಲಿದೆ.