Monday, December 23, 2024

ಪವರ್ ಸ್ಟಾರ್ ಜೇಮ್ಸ್ ಚಿತ್ರದಿಂದ ಹೊರಬಿತ್ತು ಗುಡ್ ನ್ಯೂಸ್..!

ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ನಟನೆಯ ಜೇಮ್ಸ್​ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಜೇಮ್ಸ್ ಅಪ್ಪು ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ. ಹೀಗಾಗಿ ಈ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದೆ. ಸದ್ಯ ಚೇತನ್ ಅಪ್ಪು ಹಾಗೂ ಚೇತನ್ ಕುಮಾರ್​​ ಕಾಂಬಿನೇಶನ್​ ಜೇಮ್ಸ್ ತಂಡದಿಂದ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ.

ಈ ವರ್ಷ ತೆರೆಕಾಣಲಿರುವ ಮೋಸ್ಟ್ ಅವೇಯ್ಟೆಡ್ ಸ್ಯಾಂಡಲ್​ವುಡ್​ ಸಿನಿಮಾಗಳಲ್ಲಿ ಮುಖ್ಯವಾಗಿ ಕರುನಾಡ ರಾಜರತ್ನ ಪುನೀತ್ ರಾಜ್​ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಕೂಡ ಇದೆ. ಅಪ್ಪು ಅಗಲಿಕೆಯ ನೋವು ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಇನ್ನೂ ಕಾಡುತ್ತಲೇ ಇದೆ. ಪುನೀತ್ ಅಗಲಿಕೆಯ ನೋವಿನಲ್ಲಿರೋ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಜೇಮ್ಸ್​ ಚಿತ್ರವನ್ನು ಬಿಗ್​ ಸ್ಕ್ರೀನ್​ ಮೇಲೆ ನೋಡಲು ಕಾತರದಿಂದ ಕಾದು ಕುಳಿತಿದ್ದಾರೆ.

ಜೇಮ್ಸ್​ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಅವರ ಬಹು ವರ್ಷಗಳ ಕನಸು. ಅಪ್ಪು ನಟನೆಯ ಈ ಚಿತ್ರ ಟೈಟಲ್ ಫಿಕ್ಸ್ ಆದ ದಿನದಿಂದ್ಲೂ ಒಂದಲ್ಲಾ ಒಂದು ವಿಶೇಷತೆಗಳಿಂದಾಗಿ ಸದ್ದು ಮಾಡುತ್ತಲೇ ಇದೆ. ಆದ್ರೆ ಟೈಟಲ್ ಅನೌನ್ಸ್​ ಅದ ನಂತ್ರ ಕಾರಣಾಂತರಗಳಿಂದ ಸಿನಿಮಾ ಶೂಟಿಂಗ್ ತಡವಾಗುತ್ತಲೇ ಬಂತು. ಹೀಗಾಗಿ ಇತ್ತ ಅಪ್ಪು ಅವ್ರ ಫ್ಯಾನ್ಸ್​ ಕೂಡ ಜೇಮ್ಸ್​ ಸಿನಿಮಾ ಅದ್ಯಾವಾಗ ಶೂಟಿಂಗ್ ಮುಗಿಸಿ ತೆರೆ ಕಾಣುತ್ತೆ ಅಂತ ಕಾಯುತ್ತಲೇ ಇದ್ರು. ಕಡೆಗೂ ಇದೀಗ ಆ ಅಮೃತ ಘಳಿಗೆ ಸಮೀಪಿಸಿದೆ.

ಪುನೀತ್ ನಟನೆಯ ಜೇಮ್ಸ್​ ಚಿತ್ರದಿಂದ ಒಂದು ಗುಡ್ ನ್ಯೂಸ್ ಇದೀಗ ರಿವೀಲ್ ಆಗಿದೆ. ಅಪ್ಪು ಅಗಲಿಕೆಯ ನೋವಿನಲ್ಲೂ ಜೇಮ್ಸ್​​ ಚಿತ್ರತಂಡ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಮಾಡಿ ಕುಂಬಳಕಾಯಿ ಹೊಡೆದಿದೆ. ಜೇಮ್ಸ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗುವ ಮುನ್ನವೇ ದುರಾದೃಷ್ಟವಶಾತ್ ಪುನೀತ್ ರಾಜ್​ಕುಮಾರ್​ ನಮ್ಮನ್ನೆಲ್ಲಾ ಅಗಲಿದ್ರು. ಆಗ ಜೇಮ್ಸ್​ ಚಿತ್ರದ ಶೂಟಿಂಗ್ ಬಹುತೇಕ ಮುಗಿದು ಕೊನೆಯ ಹಂತದ ಚಿತ್ರೀಕರಣ ಮಾತ್ರ ಉಳಿದಿತ್ತು.

ಜೇಮ್ಸ್ ಚಿತ್ರದಿಂದ ನನಸಾಗಿದೆ ದೊಡ್ಮನೆ ಸಹೋದರರ ಕನಸು : 

ಅಪ್ಪು ಇಲ್ಲದೆ ಜೇಮ್ಸ್​ ಚಿತ್ರದ ಚಿತ್ರೀಕರಣವನ್ನು ಪೂರೈಸೋದು ಹೇಗೆ ಅಂತ ಚಿತ್ರತಂಡಕ್ಕೆ ದಿಕ್ಕು ತೋಚದಂತಾಗಿತ್ತು. ಆದ್ರೂ ಸಹ ನಿರ್ದೇಶಕ ಚೇತನ್​ಕುಮಾರ್​ ಹಾಗೂ ಚಿತ್ರತಂಡ ಕಷ್ಟಪಟ್ಟು ಸದ್ಯ ಸಿನಿಮಾ ಶೂಟಿಂಗನ್ನು ಕಂಪ್ಲೀಟ್ ಮಾಡಿದೆ. ವಿಶೇಷ ಅಂದ್ರೆ ಅಪ್ಪು ಅವ್ರ ಜೇಮ್ಸ್​ ಸಿನಿಮಾದಲ್ಲಿ ಅವರ ಅಣ್ಣಂದಿರಾದ ಡಾ.ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಕೂಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

ಒಂದೇ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಅಣ್ಣಾವ್ರ ಮೂರೂ ಜನ ಮಕ್ಕಳೆಲ್ಲರೂ ನಟಿಸ್ಬೇಕು ಅನ್ನೋದು ದೊಡ್ಮನೆಯ ಈ ಪ್ರೀತಿಯ ಸಹೋದರರ ಕನಸಾಗಿತ್ತು. ಜೊತೆಗೆ ಅದು ಆ ಮೂವರು ಅಭಿಮಾನಿಗಳ ಆಸೆಯೂ ಆಗಿತ್ತು. ಆದ್ರೆ ಆ ಕನಸು ನನಸಾಗುವ ಮೊದಲೇ ಪವರ್ ಸ್ಟಾರ್ ನಮ್ಮನ್ನ ಬಿಟ್ಟು ಬಹುದೂರ ಸಾಗಿಬಿಟ್ರು. ಆದ್ರೆ ಜೇಮ್ಸ್​ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಕೂಡ ಸ್ಪೆಷಲ್ ರೋಲ್ಸ್​​ನಲ್ಲಿ ನಟಿಸಿದ್ದು ತಮ್ಮ ಪ್ರೀತಿಯ ತಮ್ಮನಿಗೆ ಗೌರವ ಸೂಚಿಸಿದ್ದಾರೆ. ಈ ಮೂಲಕ ದೊಡ್ಮನೆ ಸಹೋದರರ ಕನಸು ನನಸಾಗಿದೆ.

ಜೇಮ್ಸ್ ಸಿನಿಮಾ ಶೂಟಿಂಗ್​ನ ಕೊನೆಯ ದಿನವೂ ಕೂಡ ಶಿವಣ್ಣ ಹಾಗೂ ರಾಘಣ್ಣ ಶೂಟಿಂಗ್ ಸೆಟ್​ಗೆ ಹೋಗಿದ್ರು. ಜೊತೆಗೆ ರಾಘಣ್ಣನ ಪುತ್ರ ಯುವ ರಾಜ್​ಕುಮಾರ್​, ರಾಮ್​ಕುಮಾರ್ ಪುತ್ರ ಧಿರೇನ್ ಹಾಗೂ ರಾಜ್​ ಕುಟುಂಬದ ಆಪ್ತರೂ ಕೂಡ ಸಿನಿಮಾ ಸೆಟ್​​ನಲ್ಲಿ ಇದ್ರು. ಜೇಮ್ಸ್​​ ಸಿನಿಮಾ ಚಿತ್ರೀಕರಣದ ಅಂತಿಮ ದಿನ ಇಡೀ ಚಿತ್ರತಂಡ ಕುಂಬಳ ಕಾಯಿ ಹೊಡೆದು, ಅಪ್ಪು ಅವ್ರ ಭಾವಚಿತ್ರದ ಮುಂದೆ ಕುಳಿತು ಫೋಟೋ ತೆಗೆಸಿಕೊಂಡು ಅವರಿಗೆ ನಮನ ಸಲ್ಲಿಸಿದ್ದಾರೆ. ಜೇಮ್ಸ್​ ಚಿತ್ರತಂಡದ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅಂದಹಾಗೆ ಅಪ್ಪು ಅಗಲಿಕೆಯ ನಂತ್ರ ಜೇಮ್ಸ್​ ಚಿತ್ರದಲ್ಲಿನ ಅವರ ಪಾತ್ರಕ್ಕೆ ಶಿವಣ್ಣ ಡಬ್ಬಿಂಗ್ ಮಾಡಲಿದ್ದಾರೆ ಅನ್ನಲಾಗ್ತಿದೆ. ಇನ್ನೇನು ಕೆಲ ದಿನಗಳಲ್ಲೇ ಇದ್ರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾ ಆನಂದ್ ಅಪ್ಪು ಅವ್ರಿಗೆ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್ ಪತಿಕೊಂಡ ಜೇಮ್ಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಇದೇ ವರ್ಷದ ಮಾರ್ಚ್​ 17ರಂದು ಅಂದ್ರೆ ಅಪ್ಪು ಹುಟ್ಟುಹಬ್ಬದ ವಿಶೇಷ ದಿನ ಜೇಮ್ಸ್​ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಒಟ್ಟಾರೆ ಸದ್ಯ ಜೇಮ್ಸ್​ ಚಿತ್ರದ ಶೂಟಿಂಗ್ ಕಂಪ್ಲೀಟ್​ ಆಗಿದ್ದು, ಈ ವಿಷ್ಯ ಕೇಳಿ ಅಪ್ಪು ಫ್ಯಾನ್ಸ್​ ಸಂತಸದಲ್ಲಿದಲ್ಲಿದ್ದಾರೆ.

RELATED ARTICLES

Related Articles

TRENDING ARTICLES