Monday, December 23, 2024

ಕೋವಿಡ್ 3ನೇ ಅಲೆ; ಭರ್ತಿಯಾಗುತ್ತಿರುವ ಆಸ್ಪತ್ರೆ ಬೆಡ್​ಗಳು!

ಕೊವಿಡ್​ ಕೇಸ್​ ಹೆಚ್ಚಳದ ಬೆನ್ನಲ್ಲೇ ಹೊಸ ಆತಂಕ ಸೃಷ್ಟಿಯಾಗಿದೆ. ಒಬ್ಬರ ಹಿಂದೆ ಒಬ್ಬರು ಆಸ್ಪತ್ರೆ ಮೆಟ್ಟಿಲೇರುತ್ತಿದ್ದರೆ, ಹೊಸ ಸಿಂಪ್ಟಮ್ಸ್​ ಮೂಲಕ ದಾಳಿ ಇಡಲು ವುಹಾನ್​ ವೈರಸ್​ ಸಜ್ಜಾಗಿದೆ. ರಾಜಧಾನಿಯಲ್ಲಿಂದು ದಾಖಲೆ ಪ್ರಮಾಣದ ಪ್ರಕರಣಗಳು ಪತ್ತೆಯಾಗುವ ಮೂಲಕ ಸಿಲಿಕಾನ್​ ಸಿಟಿ ಮತ್ತೊಮ್ಮೆ ಡೇಂಜರ್​ ಸ್ಥಿತಿಗೆ ತಲುಪಿದೆ.

ಸರ್ಕಾರ ವಿಧಿಸಿರುವ ಕಠಿಣ ನಿಮಯಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಜಧಾನಿಯಲ್ಲಿಂದು ಕೋವಿಡ್​ ಪ್ರಕರಣಗಳು ಸ್ಫೋಟಗೊಂಡಿವೆ. ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಸೋಂಕು ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 30590 ಸಿಟಿ ಮಂದಿಗೆ ಸೋಂಕು ತಗುಲಿದೆ..ಕೇಸ್​ ಹೆಚ್ಚಳದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಅಧಿಕಗೊಂಡಿದೆ.

ಶೀತ, ಕೆಮ್ಮು, ಜ್ವರ ಎಂದು ಆಸ್ಪತ್ರೆಯ ಒಪಿಡಿಗಳು ರೋಗಿಗಳಿಂದ ತುಂಬಿ ಹೋಗಿದ್ರೆ, ಅತ್ತ ಹಾಸ್ಪಿಟಲ್​ ಅಡ್ಮಿಷನ್​ ಕೂಡ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳ ಅಂತರದಲ್ಲಿ 4,795 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯು, ವೆಂಟಿಲೇಟರ್​, ಹೆಚ್​ಡಿಯು ಬೆಡ್​ಗಳು ಕೂಡ ಭರ್ತಿಯಾಗುತ್ತಿದ್ದು,ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗೆ ಅಡ್ಮಿಟ್​ ಆಗಲು ಸೋಂಕಿತರು ಒಲವು ತೋರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,293 ಜನರಲ್ ಬೆಡ್‌ಗಳ ನಿಯೋಜನೆ ಆಗಿದ್ದರೂ,ಈ ಪೈಕಿ 3,983 ಬೆಡ್‌ಗಳು ಬಳಕೆ ಆಗದೇ ಹಾಗೆ ಉಳಿದಿದೆ.

ಹಾಗಿದ್ರೆ ಎಲ್ಲಿ ಎಷ್ಟು ಬೆಡ್​ಗಳು ಭರ್ತಿ ಆಗಿದೆ, ಎಷ್ಟು ಖಾಲಿ ಆಗಿದೆ ಅಂತ ನೋಡುವುದಾದರೆ.ಬಿಬಿಎಂಪಿ ಅಡಿಯಲ್ಲಿ ಕೊವಿಡ್​ ಚಿಕಿತ್ಸೆಗೆ ಒಟ್ಟು 4,293 ಬೆಡ್​ಗಳನ್ನು ಮೀಸಲಿಡಲಾಗಿದೆ. ಈ ಪೈಕಿ ಇನ್ನೂ 3,983 ಬೆಡ್‌ಗಳು ಲಭ್ಯವಿದೆ. 451 ಐಸಿಯು ಬೆಡ್​ಗಳ ಪೈಕಿ 382 ಲಭ್ಯವಿದ್ದು, 2,723 HDU ಬೆಡ್​ಗಳಲ್ಲಿ 2,533 ಲಭ್ಯವಿದೆ. ICU – ವೆಂಟಿಲೇಟರ್​ 450 ಪೈಕಿ 409 ಲಭ್ಯವಿದೆ. ಆದ್ರು ಕೂಡಾ ಕೆಲವು ಜನ ಖಾಸಗಿ ಆಸ್ಪತ್ರೆಗಳಿಗೆ ಸ್ವಂತ ಖರ್ಚಿನಲ್ಲಿ ದಾಖಲಾಗ್ತಿದ್ದಾರೆ. ಇದ್ರಿಂದ ನಮ್ಮಲ್ಲೂ ಬೆಡ್ ಖಾಲಿ ಇದೆ ಅಂತ ಪಾಲಿಕೆ ತಿಳಿಸ್ತಿದೆ.

ಎರಡನೇ ಅಲೆಗೆ ಹೋಲಿಸಿದ್ರೆ ಮೂರನೇ ಅಲೆಯಲ್ಲಿ ವೈರಸ್​ ಆರ್ಭಟ ಕಮ್ಮಿ ಆಗಿದೆ.ಅಂದರೆ ದೇಹಕ್ಕೆ ದಾಳಿ ಇಡುವ ಪ್ರಕ್ರಿಯೆ ಸೌಮ್ಯ ಸಭಾವದ್ದಾಗಿದೆ.ಇದರಿಂದ ಕೆಲವರು ಮನೆಯಲ್ಲೇ ಟೆಸ್ಟ್​ ಮಾಡಿಸಿಕೊಂಡವರು ಆಸ್ಪತ್ರೆಗೆ ವಿಷಯ ತಿಳಿಸದೇ ಮನೆಯಲ್ಲಿಯೇ ಮೌನವಾಗಿದ್ದಾರೆ.ಆದರೆ, ಹಾಗೆ ಮಾಡುವುದು ಅಪರಾಧ ಎಂದಿರುವ ಆರೋಗ್ಯ ಇಲಾಖೆ, ಸ್ಥಳೀಯ ಆಸ್ಪತ್ರೆಗಳಿಗೆ ಸೂಕ್ತ ಮಾಹಿತಿ ಒದಗಿಸಲು ಮನವಿ ಮಾಡಿದೆ. ಮುಂದೊಂದು ದಿನ ಚಿಕಿತ್ಸೆ ಅಗತ್ಯವಾದರೆ ಆಗ ಸಮಸ್ಯೆ ಆಗಬಹುದು.ಹೀಗಾಗಿ ಎಚ್ಚರಿಕೆಯಿಂದ ಇರಲು ತಿಳಿಸಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES