ಕೇರಳ ಸರ್ಕಾರವು ರಚಿಸಿದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಗಣರಾಜ್ಯೋತ್ಸವ ಪರೆಡ್ನಲ್ಲಿ ಪ್ರದರ್ಶನಕ್ಕೆ ಕೇಂದ್ರ ನಿರಾಕರಿಸಿರುವುದನ್ನು, ಸುಳ್ಳು ಹೇಳಿ ಸಮರ್ಥಿಸಿಕೊಳ್ಳುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಆಗ್ರಹಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾರಾಯಣ ಗುರುಗಳಿಗೆ ಅವಮಾನ ಮಾಡಿರುವುದು ಖಂಡನೀಯ. ಕರ್ನಾಟಕದ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್ ಅವರು ಮೂರು ವರ್ಷಕ್ಕೊಮ್ಮೆ ಪ್ರತಿ ರಾಜ್ಯಕ್ಕೆ ಅವಕಾಶ ಇದ್ದು, ಈ ವರ್ಷ ಕೇರಳಕ್ಕೆ ಇಲ್ಲ ಎಂದು ಸುಳ್ಳು ಹೇಳಿ ಕೇಂದ್ರವನ್ನು ಸಮರ್ಥಿಸಿದ್ದಾರೆ.
ಈ ಕಾರಣದಿಂದ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಸೂಕ್ತರಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗಣರಾಜ್ಯೋತ್ಸವದ ದಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರದರ್ಶನ ಮಾಡಿ ಗೌರವ ಸಲ್ಲಿಸಲಾಗುವುದು. ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರ ತಿರಸ್ಕರಿಸಿದ ಟ್ಯಾಬ್ಲೋವನ್ನು ಪ್ರತಿ ಜಿಲ್ಲೆಯಲ್ಲಿ ಪ್ರದರ್ಶನ ಮಾಡಲು ನಿರ್ಧರಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಸುನಿಲ್ ಕುಮಾರ್ ಅವರು ಪ್ರತಿ ಜಿಲ್ಲೆಯಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ಮಾಡಿ ಅವರಿಗೆ ಗೌರವ ಸೂಚಿಸುವ ಆದೇಶ ಮಾಡಲಿ ಎಂದು ಆಗ್ರಹಿಸಿದರು.