ರಾಜ್ಯ : ಚಾಮರಾಜನಗರ ಹಂಚಿಕೊಂಡಿರುವ ಎಲ್ಲಾ ಗಡಿಗಳನ್ನೂ ಮತ್ತಷ್ಟು ಬಿಗಿ ಮಾಡಲಿದ್ದು, ಎಲ್ಲಾ ಕಡೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಚಾಮರಾಜನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, ಕೇರಳದಿಂದ ಬರುವವರಿಗೆ ಮಾತ್ರ ಈಗ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಿದೆ. ಆದರೆ, ಇಂದಿನಿಂದ ತಮಿಳುನಾಡಿನಿಂದ ಬರುವವರೂ ನೆಗೆಟಿವ್ ರಿಪೋರ್ಟ್ ತರುವುದನ್ನು ಕಡ್ಡಾಯ ಮಾಡಿದ್ದು ಚೆಕ್ ಪೋಸ್ಟ್ ಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ವಾರಾಂತ್ಯ ನಿರ್ಬಂಧ ತೆರವು ಸಿಎಂ ಬೊಮ್ಮಾಯಿ ಅವರು ಏಕಪಕ್ಷೀಯವಾಗಿ ನಿರ್ಧರಿಸಲಾಗಲ್ಲ. ತಜ್ಞರ ಸಮಿತಿ, ಸಂಪುಟದೊಂದಿಗೆ ಚರ್ಚಿಸಬೇಕಾಗುತ್ತದೆ. ಫೆಬ್ರವರಿ ಮೊದಲನೇ ವಾರದಲ್ಲಿ ಕೊರೋನಾ ಪ್ರಕರಣ ಉತ್ತುಂಗಕ್ಕೆ ಹೋಗಲಿದೆ ಎಂಬ ಮಾತಿದ್ದು ಜನರಿಗೆ ಅನುಕೂಲವೂ ಆಗಬೇಕು, ಆರೋಗ್ಯವನ್ನೂ ಕಾಪಾಡುವ ನಿರ್ಧಾರವನ್ನು ತಜ್ಞರೊಟ್ಟಿಗೆ ಚರ್ಚಿಸಿ ಸಿಎಂ ತಿಳಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇನ್ನು, ಜಿಲ್ಲೆಯ ಕೆಲ ಶಾಲಾ ಮಕ್ಕಳಲ್ಲಿ ಸೋಂಕು ತಗುಲುತ್ತಿದ್ದು ರಜೆ ನೀಡುವ ಕುರಿತು ಡಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕೂಡಲೇ ವ್ಯಾಕ್ಸಿನೇಷನ್ ಮಾಡಬೇಕೆಂದು ಶಿಕ್ಷಣ ಇಲಾಖೆಗೆ ಸೂಚಿಸಿದ್ದೇನೆ ಎಂದು ಉತ್ತರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಾಗ್ಗೆ ಭೇಟಿಯಾಗುತ್ತಿರುತ್ತಾರೆ. ಪಕ್ಷ ಮತ್ತು ಆಡಳಿತ ದೃಷ್ಟಿಯಿಂದ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದು ಅವರಿಬ್ಬರ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.