ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಡುವೆಯೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಸೇನಾ ಪಡೆಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಆದರೆ ಇದೇ ಸಮಯದಲ್ಲಿ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಜೀವಕ್ಕೆ ಬೆದರಿಕೆಯೊಡ್ಡುವ ಸಂಭಾವ್ಯ ಭಯೋತ್ಪಾದನೆಯ ಸಂಚಿನ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ.
ಈ ವರ್ಷದ ಗಣ ರಾಜ್ಯೋತ್ಸವ ಮೊದಲಿಗಿಂತ ಹೆಚ್ಚು ರೋಚಕವಾಗಿರಲಿದೆ. ಜನವರಿ 26 ರಂದು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕಳೆದ ವರ್ಷ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿರುವ ಅತ್ಯಾಧುನಿಕ ಐದು ರಫೇಲ್ ಯುದ್ಧ ವಿಮಾನಗಳು ಸೇರಿದಂತೆ ಒಟ್ಟು 75 ಯುದ್ಧ ವಿಮಾನಗಳು ತಮ್ಮ ಶಕ್ತಿ ಪ್ರದರ್ಶಿಸಲಿವೆ. ಆದರೆ ಈ ಸಂಭ್ರಮಕ್ಕೆ ಉಗ್ರರ ಕರಿನೆರಳು ಬಿದ್ದಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯ ನಿದ್ದೆಗೆಡಿಸಿದೆ.
ದೆಹಲಿಯ ಘಾಜಿಪುರ್ ಹೂವಿನ ಮಾರುಕಟ್ಟೆಯಲ್ಲಿ ಟೈಂ ಬಾಂಬ್ ಪತ್ತೆಯಾದ ಬೆನ್ನಲ್ಲೇ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಜೀವಕ್ಕೆ ಬೆದರಿಕೆಯೊಡ್ಡುವ ಸಂಭಾವ್ಯ ಭಯೋತ್ಪಾದನೆಯ ಸಂಚಿನ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ. ಹೌದು, ಲಷ್ಕರ್-ಎ-ತೈಯಬಾ, ದಿ ರೆಸಿಸ್ಟೆನ್ಸ್ ಫೋರ್ಸ್, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್ ನಂತಹ ಭಯೋತ್ಪಾದಕ ಗುಂಪುಗಳು ಬೆದರಿಕೆಯ ಹಿಂದೆ ಇವೆ ಎಂದು ಮಾಹಿತಿಯಲ್ಲಿದೆ.
ಗುಪ್ತಚರ ಇಲಾಖೆ ನೀಡಿರುವ 9 ಪುಟಗಳ ಮಾಹಿತಿಯಲ್ಲಿ, 75ನೇ ವರ್ಷದ ಗಣರಾಜ್ಯೋತ್ಸವದ ವೇಳೆ ದೇಶದ ಪ್ರಧಾನಿ ಸೇರಿದಂತೆ ಇತರ ಗಣ್ಯರ ಮೇಲೆ ಉಗ್ರರ ಕಣ್ಣು ಬಿದ್ದಿದೆ ಎನ್ನಲಾಗಿದೆ. ಇನ್ನು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಐದು ಮಧ್ಯ ಏಷ್ಯಾದ ದೇಶಗಳಾದ ಕಝಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನಾಯಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಸಾಧ್ಯತೆಯಿದೆ. ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದ ಮೂಲದ ಗುಂಪುಗಳಿಂದ ಬೆದರಿಕೆ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಗುಂಪುಗಳು ಗಣ್ಯರನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ಸಭೆಗಳು, ನಿರ್ಣಾಯಕ ಸಂಸ್ಥೆಗಳು ಮತ್ತು ಜನನಿಬಿಡ ಸ್ಥಳಗಳನ್ನು ವಿಧ್ವಂಸಕ ಮಾಡುವ ಗುರಿಯನ್ನು ಹೊಂದಿದ್ದು, ಡ್ರೋನ್‌ಗಳ ಮೂಲಕವೂ ದಾಳಿಗೆ ಯತ್ನಿಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.ಇದರ ಜೊತೆಗೆ ಪಾಕಿಸ್ತಾನ ಮೂಲದ ಖಲಿಸ್ತಾನಿ ಗುಂಪುಗಳು ಪಂಜಾಬ್ನಲ್ಲಿ ಉಗ್ರಗಾಮಿ ಕೃತ್ಯಕ್ಕೆ ಮತ್ತೆ ಚಾಲನೆ ನೀಡಲು ಬಂಡುಕೋರರನ್ನು ಸಜ್ಜುಗೊಳಿಸುತ್ತಿವೆ ಎಂದು ಮಾಹಿತಿಯಲ್ಲಿ ಹೇಳಿದೆ. ಒಟ್ಟಾರೆ ಗಣರಾಜ್ಯೋತ್ಸವಕ್ಕೆ ಉಗ್ರರ ಕರಿನೆರಳು ಬಿದ್ದಿದೆ ಎಂಬ ಮಾಹಿತಿ ಸರ್ಕಾರದ ಹಾಗೂ ಗುಪ್ತಚರ ಇಲಾಖೆಯ ನಿದ್ದೆ ಗೆಡಿಸಿದೆ.