Monday, December 23, 2024

ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು

ರಾಜ್ಯದೆಲ್ಲೆಡೆ ಕೊರೋನಾ ತನ್ನ ರುದ್ರನರ್ತನ ಮುಂದುವರಿಸುತ್ತಿದೆ.ಆದರೆ ಇದಕ್ಕೆಲ್ಲಾ ಕ್ಯಾರೆ ಎನ್ನದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಬಿಂದಾಸ್ ಆಗಿ ಹುಟ್ಟುಹಬ್ಬದ ಆಚರಣೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಜನರು ಕೊರೋನಾದಿಂದ ತತ್ತರಿಸಿ ಹೋಗುತ್ತಿದ್ದಾರೆ.ಕೊರೋನಾ ಅಂದರೆ ಬೆಚ್ಚಿ ಬೀಳುವಂಥಾ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಕೆಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ತಮ್ಮ ಸಂಭ್ರಮಕ್ಕಾಗಿ ಕೊರೋನಾ ರೂಲ್ಸ್​ಗಳನ್ನ ಬ್ರೇಕ್​ ಮಾಡಿ ಬೇಜಾವಬ್ದಾರಿತನ ತೋರುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಲಕ್ಷ್ಮೀ ಸಸ್ಯೋದ್ಯಾನದ ಉದ್ಘಾಟನೆ ಸಮಾರಂಭದಲ್ಲಿ ಮಾಸ್ಕ್‌ ಅಷ್ಟಕ್ಕಷ್ಟೇ.ಸಾಮಾಜಿಕ ಅಂತರವಂತೂ ಮಂಗಮಾಯವಾಗಿತ್ತು.ಈ ವೇಳೆ ಸಚಿವ ಉಮೇಶ್ ಕತ್ತಿ ಮಾಸ್ಕ್ ಹಾಕದಿದ್ದನ್ನು ಪ್ರಶ್ನಿಸಿದ್ದಕ್ಕೆ ಅವರು ಹೇಳಿದ್ದೇ ಬೇರೆ.‘ಪ್ರಧಾನಿ ಮೋದಿಯವರೇ ಮಾಸ್ಕ್ ಬಳಸಬೇಡಿ ಅಂತ ಹೇಳಿದ್ದಾರೆ. ಅದಕ್ಕೆ ನಾನು ಬಳಸಲ್ಲ ಎಂದು ಬೇವಜಾವಾಬ್ದಾರಿ ಉತ್ತರವನ್ನ ನೀಡಿದ್ದರು.ಇದು ಜನರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬೆಳಗಾವಿಯ ಸವದತ್ತಿ ಪಟ್ಟಣದ ಮನೆಯಲ್ಲಿ ಅದ್ದೂರಿಯಾಗಿ ಹುಟ್ಟಹಬ್ಬದ ಆಚರಿಸಿಕೊಂಡಿದ್ದಾರೆ.ಮಾಮನಿ ಹುಟ್ಟು ಹಬ್ಬಕ್ಕೆ ಶುಭ ಕೋರಲು ಅಭಿಮಾನಿಗಳು,ಬೆಂಬಲಿಗರು ಹಾಗೂ ಸ್ಥಳೀಯ ಪೊಲೀಸರ ದಂಡೇ ಆಗಮಿಸಿತ್ತು.ಈ ವೇಳೆ ಮಾಸ್ಕ್, ಸಾಮಾಜಿಕ ಅಂತರವೇ ಇಲ್ಲದಾಗಿತ್ತು.

ಕಲಬುರಗಿಯ ಜೇವರ್ಗಿ ತಹಶೀಲ್ದಾರ್‌ ವಿನಯ್ ಪಾಟೀಲ್ ಕೊವಿಡ್ ನಿಯಮ ಗಾಳಿಗೆ ತೂರಿ ಕಚೇರಿಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಮಾಸ್ಕ್​​ ಮತ್ತು ಸಾಮಾಜಿಕ ಅಂತರವಿಲ್ಲದೆ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ವಿಜಯಪುರದ ಜನ ವಿಜ್ರಂಭಣೆಯಿಂದ ನೀಲಗಂಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಆಚರಿಸಿದ್ರು.ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದ ರಥೋತ್ಸವದಲ್ಲಿ ಜನ ಗುಂಪು ಗುಂಪಾಗಿ ಸೇರಿ ತೇರು ಎಳೆದು, ಮಾಸ್ಕ್​​ ಇಲ್ಲದೆ, ಅಂತರವನ್ನೆ ಮರೆತ್ತಿದ್ದರು.

ಕಾರವಾರದಲ್ಲಿ ಜಿಲ್ಲಾಡಳಿತದಿಂದ ಮಹಾ ಎಡವಟ್ಟು ನಡೆಯುತ್ತಿದೆ.ಮಾಲಾದೇವಿ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಿದ್ದ ಜಿಲ್ಲಾಡಳಿತ ವಿರುದ್ಧ ಜನರು ಭಾರಿ ಅಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.ಜಾತ್ರೆಗಳಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ ಕ್ರೀಡೆಗೆ ಯಾಕೆ ಅನುಮತಿ ನೀಡಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಇನ್ನು ಈ ಕ್ರೀಡಾಕೂಟದಲ್ಲಿ ಸುಮಾರು 800ಕ್ಕೂ ಅಧಿಕ ಕ್ರೀಡಾಪಟುಗಳು ಮಾಸ್ಕ್, ಸಾಮಾಜಿಕ ಅಂತರ ಮರೆತು ಕ್ರೀಡೆಯಲ್ಲಿ ಭಾಗಿಯಾಗಿದ್ದರು.

ಒಟ್ಟಿನಲ್ಲಿ ರಾಜ್ಯದ ಅಧಿಕಾರಿಗಳು, ಜನಪ್ರತಿನಿಧಿಗಳಿಂದಲೇ ಆಗುತ್ತಿರುವ ಈ ರೀತಿಯ ಬೇಜವಾಬ್ದಾರಿತನದಿಂದಾಗಿ ಕೊರೋನಾ ಎರಡು ದಿನಕ್ಕೊಮ್ಮೆ ದುಪ್ಪಟ್ಟು ಆಗುವಂತಾಗಿದೆ. ಹೀಗಾಗಿ ಸರ್ಕಾರ ಇನ್ನಾದರು ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕಿದೆ.

RELATED ARTICLES

Related Articles

TRENDING ARTICLES