Tuesday, November 5, 2024

ವಿಮಾನಕ್ಕೆ 5ಜಿ ತಂತ್ರಜ್ಞಾನದಿಂದ ಡೇಂಜರ್​​

ಇವತ್ತು ಜಗತ್ತು ಸಾಕಷ್ಟು ವೇಗವಾಗಿ ಬೆಳೆಯೋದಕ್ಕೆ ಶುರು ಮಾಡಿದೆ. ಕಳೆದ ಎರಡು ವರ್ಷಗಳಿಂದ ಜಗತ್ತಿನಾದ್ಯಂತ ಸ್ವಲ್ಪ ಕುಂಟಿತವಾಗಿದ್ದ ಅಭಿವೃದ್ಧಿ ಕಾರ್ಯಗಳು ಈಗ ಸ್ವಲ್ಪ ಬಲಿಷ್ಟವಾಗ್ತಾ ಇದೆ. ಆದ್ರೆ ಈಗ ಮತ್ತೆ ಒಮೈಕ್ರಾನ್​ ಹಾವಾಳಿ ಶುರುವಾಗಿರೊದ್ರಿಂದ ಮತ್ತೆ ಲಾಕ್​ಡೌನ್​ ಭೀತಿ ಕೂಡ ಜನರನ್ನ ಹೆಚ್ಚು ಕಾಡೋದಕ್ಕೆ ಶುರುವಾಗಿದೆ. ಆದ್ರೆ ಕಳೆದ ವರ್ಷ ಇಷ್ಟೆಲ್ಲದರ ಮಧ್ಯೆಯೂ ಕೂಡ ಹೆಚ್ಚಾಗಿ ಸಧೃಢವಾಗಿದ್ದು ಅಂದ್ರೆ ಅದು ಕೇವಲ ಟೆಲಿಕಾಮ್​ ಕ್ಷೇತ್ರ ಮಾತ್ರ. ಕಳೆದ ಒಂದು ವರ್ಷದಿಂದ ಟೆಲಿಕಾಮ್​ ಕ್ಷೇತ್ರ ಸ್ವಲ್ಪ ಹೆಚ್ಚಾಗೇ ಯಶಸ್ಸು ಸಾಧಿಸಿಕೊಂಡು ಬರ್ತಾ ಇದೆ. ಅದರಲ್ಲೂ 5 ಜಿ ತಂತ್ರಜ್ಞಾನದ ವಿಚಾರದಲ್ಲಂತು, ಸಾಕಷ್ಟು ಬೆಳವಣಿಗೆಗಳು ಹಲವು ದೇಶಗಳ ಟೆಲಿಕಾಮ್​ ಕ್ಷೇತ್ರದಲ್ಲಿ ಹೆಚ್ಚಾಗಿ ನಡೆಯೋದಕ್ಕೆ ಶುರುವಾಗಿದೆ.

ಈಗಾಗಲೆ ಅಮೆರಿಕ ಸೇರಿದ ಹಾಗೆ ಕೆಲವು ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ 5G ತಂತ್ರಜ್ಞಾನಗಳನ್ನ ಅಳವಡಿಸಲಾಗಿದ್ದು, ಭಾರತ ಸೇರಿದ ಹಾಗೆ ಇನ್ನಷ್ಟು ರಾಷ್ಟ್ರದ ಪ್ರಮುಖ ನಗರಗಳು 5G ಸೇವೆಯನ್ನ ಪಡೆಯೋದಕ್ಕೆ ಸಿದ್ಧತೆಯನ್ನ ನಡೆಸುತ್ತಿದೆ. ಆದ್ರೆ ಈ ಬಗ್ಗೆ ಈ ಹಿಂದಿನಿಂದಲೂ ಪಕ್ಷಿ ಪ್ರಿಯರು ಸೇರಿದ ಹಾಗೆ ಹಲವು ಪ್ರಾಣಿಪ್ರಿಯರು ಈ 5G ಯೋಜನೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದು, ಇದು ಮಾನವನ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ. ಹಾಗಾಗಿ 5G ತರೋದು ಬೇಡ ಅಂತ ಸಾಕಷ್ಟು ಜನ ಒತ್ತಾಯವನ್ನ ಮಾಡುತ್ತಲೇ ಇದ್ದಾರೆ. ಇದೀಗ ಈ ಬಗ್ಗೆ ಕೆಲ ವಿಮಾನ ಸಂಸ್ಥೆಯ ಸಿಇಓಗಳು ಅಮೆರಿಕದಲ್ಲಿ ಧ್ವನಿ ಎತ್ತಿದ್ದಾರೆ.

ವಿಮಾನಗಳ ದುರಂತಕ್ಕೆ 5ಜಿ ನೆಟ್‌ವರ್ಕ್ ಕೂಡ ಕಾರಣವಾಗಬಹುದು ಅಂತ ಅಮೆರಿಕ ಏರ್‌ಲೈನ್ಸ್ ಕಂಪನಿ ಸಿಇಒಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ನೂತನ ವೈರ್‌ಲೆಸ್ 5ಜಿ ಸೇವೆ ಹಲವು ಆಪತ್ತುಗಳನ್ನ ತರಲಿದ್ದು ಅವುಗಳಲ್ಲಿ ಪ್ರಮುಖವಾಗಿ, ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು ಅಂತ ಯುಎಸ್ ಕಾರ್ಗೋ ಮತ್ತು ಪ್ಯಾಸೆಂಜರ್ ಏರ್‌ಕ್ರಾಫ್ಟ್ ಆಪರೇಟರ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಪ್ರಮುಖ ಏರ್‌ಲೈನ್ಸ್​ ಕಂಪನಿಗಳ ಪ್ರಕಾರ, ಹೊಸ ಸೇವೆಯು ಹೆಚ್ಚಿನ ಸಂಖ್ಯೆಯ ವೈಡ್ ಬಾಡಿ ಪ್ಲೇನ್‌ಗಳನ್ನು ನಿಷ್ಪ್ರಯೋಜಕವಾಗಿಸಬಹುದು ಅನ್ನೋ ಆಘಾತಕಾರಿ ಹಳಿಕೆಯನ್ನ ನೀಡಿದ್ದಾರೆ.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಹೇಳುವ ಪ್ರಕಾರ, 5G ತರಂಗ ಪ್ರಮುಖವಾಗಿ ಅಲ್ಟಿಮೀಟರ್ ಹಾಗು ಕಡಿಮೆ ಗೋಚರತೆಯ ಕಾರ್ಯಾಚರಣೆಗಳಂತಹ ಸಂದರ್ಭದಲ್ಲಿ ಹೆಚ್ಚು ಅಪಾಯ ಸಂಭವಿಸಲಿದೆ. ಅಂತಹ ಸ್ಥಿತಿಯಲ್ಲಿ ವಿಮಾನವನ್ನು ನಿರ್ವಹಿಸುವುದು ಅತ್ಯಂತ ಅಪಾಯಕಾರಿ ಅಂತ ಹೇಳಿಕೆಯನ್ನ ನೀಡಿದೆ. ಸದ್ಯಕ್ಕೆ ಇದೀಗ ಅಮೆರಿಕನ್ ಕಂಪನಿ AT&T ಮತ್ತು ವೆರಿಝೋನ್ ಕಳೆದ ವರ್ಷ ಹರಾಜಿನಲ್ಲಿ $80 ಬಿಲಿಯನ್ ಬಿಡ್ಡಿಂಗ್​ ಮಾಡಿತ್ತು. ಈ ಬಿಡ್ಡಿಂಗ್​ 5Gಗೆ ಸಂಬಂಧಿಸಿದ್ದಾಗಿತ್ತು. ಈ ಮೂಲಕ C-ಬ್ಯಾಂಡ್ ಸ್ಪೆಕ್ಟ್ರಮ್ ಬಿಡ್ ಅನ್ನು ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಅಮೆರಿಕದ ಏರ್​ಪೋರ್ಟ್​ ರನ್‌ವೇ ಸುತ್ತಲೂ 5ಜಿ ನೆಟ್‌ವರ್ಕ್‌ ನಿರ್ಮಾಣಕ್ಕೆ ಸಿದ್ಧತೆಯನ್ನ ನಡೆಸಲಾಗ್ತಾ ಇದೆ. ಒಂದು ವೇಳೆ ಇದರ ತರಂಗದ ತೀವ್ರತೆ ಹೆಚ್ಚಾಗಿದ್ರೆ. ತಾಂತ್ರಿಕವಾಗಿ ದೊಡ್ಡ ವಿಮಾನಗಳಿಗೆ ತೊಂದರೆಯಾಗಲಿದೆ. ಹೀಗಾಗಿ ವಿಮಾನ ನಿಲ್ದಾಣದ ರನ್‌ವೇಯ ಸುಮಾರು 3.2 ಕಿಲೋ ಮೀಟರ್​ಗಳಿಂದ  5G ಟವರ್​ಗಳನ್ನು ಮುಕ್ತಗೊಳಿಸಬೇಕು ಅಂತ ಪ್ರಮುಖ ವಿಮಾನಯಾನ ಕಂಪನಿಗಳು ಅಮೆರಿಕನ್​ ಸರ್ಕಾರಕ್ಕೆ ಕೇಳಿಕೊಂಡಿದೆ.

ಈ ಬಗ್ಗೆ ಕಳೆದ ನವೆಂಬರ್ ಆರಂಭದಲ್ಲಿ FAA ವಿಮಾನಗಳ ಮೇಲೆ 5G  ಪರಿಣಾಮದ ಬಗ್ಗೆ ಕೆಲ ತಜ್ಞರು ಎಚ್ಚರಿಕೆಯನ್ನ ನೀಡಿದ್ದರು. ಇದರ ನಂತರ, ಅಮೆರಿಕನ್​ ಸರ್ಕಾರದ ಹಸ್ತಕ್ಷೇಪದಿಂದ C-ಬ್ಯಾಂಡ್ ಸ್ಪೆಕ್ಟ್ರಮ್ ಬಳಕೆಯನ್ನು ಜನವರಿ 5ರ ವರೆಗೆ ಮುಂದೂಡಲಾಗಿತ್ತು. ಇದೀಗ ಈ ಯೋಜನೆಯನ್ನ ಜನವರಿ 19ರ ವರೆಗೆ ವಿಸ್ತರಿಸಲಾಗಿದೆ. 50 ವಿಮಾನ ನಿಲ್ದಾಣಗಳಿಗೆ ತಾತ್ಕಾಲಿಕ ಬಫರ್ ವಲಯಗಳನ್ನು ರಚಿಸಲು ಸಹ ಒಪ್ಪಿಗೆ ನೀಡಲಾಗಿದೆ. ಈಗ ಒಪ್ಪಂದದ ಪ್ರಕಾರ, AT&T ಮತ್ತು ವೆರಿಝೋನ್ ಬುಧವಾರದಿಂದ ಸೇವೆಯನ್ನು ಪ್ರಾರಂಭಿಸಲಿವೆ. ಆದ್ದರಿಂದ ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್ ಮತ್ತೆ ತಾಂತ್ರಿಕ ತೊಂದರೆಗಳು ಹಾಗು ಕೆಲ ಅಪಾಯಗಳ ಬಗ್ಗೆ ಹೇಳಿಕೆ ನೀಡಿದ್ದು, ಇದೀಗ ಅಮೆರಿಕನ್​ ಸರ್ಕಾರವನ್ನ ಮತ್ತೆಸ ಇಕ್ಕಟ್ಟಿಗೆ ಸಿಲುಕಿಸಿದೆ.

ಇದು ಅಮೆರಿಕದ ಕತೆಯಾದ್ರೆ ಭಾರತದಲ್ಲಿ ಭಾರೀ ನಿರೀಕ್ಷೆ ಹೊಂದಿರುವ 5ಜಿ ನೆಟ್‌ವರ್ಕ್ ಬಗ್ಗೆ ಕೂಡ ಇದೀಗ ಆತಂಕ ಹೆಚ್ಚಾಗಿದೆ.  2022 ಅಂತ್ಯದಲ್ಲಿ 5G ನೆಟ್​ವರ್ಕ್​ ಸೇವೆ ಲಭ್ಯವಾಗಲಿದ್ದು. ಆರಂಭದಲ್ಲಿ ದೇಶಾದ್ಯಂತ 13 ನಗರಗಳಲ್ಲಿ 5ಜಿ ನೆಟ್ ವರ್ಕ್ ಪ್ರಾರಂಭವಾಗಲಿದೆ ಅಂತ ತಿಳಿದು ಬಂದಿದೆ.  ಈ ವರ್ಷದ ಆರಂಭದಲ್ಲಿ ಏರ್‌ಟೆಲ್, ಜಿಯೋ ಹಾಗೂ ವಿಐ ಟೆಲಿಕಾಂ ಕಂಪನಿಗಳು 5ಜಿ ಪ್ರಯೋಗಗಳನ್ನು ನಡೆಸಿದ್ದಾವೆ. ಇದೀಗ 224 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಷದ ಕೊನೆಯಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದ್ರೆ ಈ 5G ತರಂಗಳು ಭಾರತೀಯರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಅಂತ ತಜ್ಞರು ಅಭಿಪ್ರಾಯವನ್ನ ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಇದೀಗ ಅಮೆರಿಕದ ಏರ್​ಲೈನ್ಸ್​ 5G ಯಿಂದ ವಿಮಾನ ಅಪಘಾತವಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದು. ಇದು ಕೇವಲ ಅಮೆರಿಕಗೆ ಮಾತ್ರ ಸೀಮಿತವಾಗೋದಿಲ್ಲ ಹಾಗಾಗಿ ಭಾರತದಲ್ಲಿ 5G ತರುವಾಗಲು ಕೂಡ ಈ ಬಗ್ಗೆ ನಮ್ಮ ಸರ್ಕಾರ ಎಚ್ಚೆತ್ತುಕೊಳ್ಳ ಬೇಕಾಗಿದೆ. ಹಾಗಾಗಿ ಈ ಬಗ್ಗೆ ನಮ್ಮ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದೆ ಅಂತ ಕಾದು ನೋಡಬೇಕಾಗಿದೆ.

ಲಿಖಿತ್​​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES