Monday, December 23, 2024

ಊಟಕ್ಕೆ ಕರೆದಿಲ್ಲ ಎಂಬ ಕಾರಣಕ್ಕೆ ಹತ್ಯೆ

ಹಾಸನ : ಮಾಂಸದ ಊಟಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದಲ್ಲಿ ಜರುಗಿದೆ.

ಶರತ್ (28) ಎಂಬಾತ ಕೊಲೆಯಾದ ಯುವಕನಾಗಿದ್ದು, ನಟರಾಜ್​ ಎಂಬಾತನು ಈ ಕೊಲೆಯ ಆರೋಪಿ ಆಗಿದ್ದಾನೆ. ಮಾಂಸ ಊಟಕ್ಕೆ ಕರೆದಿಲ್ಲ ಎಂಬ ವಿಷಯಕ್ಕೆ ಕೋಪಗೊಂಡು ಆರಂಭವಾದ ಜಗಳಲ್ಲಿ ಶರತ್ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಶರತ್‍ನನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಜನವರಿ 16ರಂದು ಗ್ರಾಮದ ಗಿರೀಶ್ ಸಖರಾಯಪಟ್ಟಣದಲ್ಲಿ ದೇವರ ಹರಕೆ ಕೊಟ್ಟು ಊಟ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಶರತ್ ಮತ್ತು ಆತನ ಮನೆಯವರು ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಗ್ರಾಮದ ನಟರಾಜ್‍ನನ್ನು ಆಹ್ವಾನಿಸಿರಲಿಲ್ಲ. ನಮ್ಮನ್ನು ಯಾಕೆ ಊಟಕ್ಕೆ ಕರೆದಿಲ್ಲ ಎಂದು ನಟರಾಜ್ ತನ್ನ ಗೆಳೆಯ ಶರತ್ ಜೊತೆ ಜಗಳ ಮಾಡಿದ್ದಾನೆ.

ಶರತ್ ಇದು ನಮ್ಮ ಮನೆ ಕಾರ್ಯಕ್ರಮ ಅಲ್ಲ. ಗಿರೀಶ್ ಅವರ ಮನೆಯ ಕಾರ್ಯಕ್ರಮ. ಹೀಗಾಗಿ ಯಾಕೆ ಕರೆದಿಲ್ಲ ಅವರನ್ನೇ ಕೇಳು ಎಂದಿದ್ದಾನೆ. ಇದೇ ವಿಷಯವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದರು. ಈ ವಿಚಾರವಾಗಿ ಕುಪಿತಗೊಂಡು ಭಾನುವಾರ ರಾತ್ರಿ ಮನೆಗೆ ನುಗ್ಗಿದ ನಟರಾಜ್ ಮತ್ತು ಸ್ನೇಹಿತರು ಮಾರಕಾಸ್ತ್ರಗಳಿಂದ ಶರತ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ಸಂಬಂಧ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

RELATED ARTICLES

Related Articles

TRENDING ARTICLES