ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಕಾಳಿಸ್ವಾಮಿ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ.ಇದೀಗ ಕೋಮ ಸೌಹಾರ್ಧತೆಗೆ ಧಕ್ಕೆ ತರುವಂತೆ ಹೇಳಿಕೆ ಕೊಟ್ಟು ಪೊಲೀಸರ ಅತಿಥಿಯಾಗಿದ್ದಾರೆ.ಅಷ್ಟಕ್ಕೂ ಪೊಲೀಸರು ಋಷಿಕುಮಾರ ಸ್ವಾಮಿಯನ್ನು ಬಂಧಿಸಿದ್ದಾದ್ರೂ ಏಕೆ ಅಂತೀರಾ?
ಶ್ರೀರಂಗಪಟ್ಟಣದ ಐತಿಹಾಸಿಕ ಮಸೀದಿ ಹಲವು ದಿನಗಳಿಂದ ಪದೇ ಪದೇ ಸುದ್ದಿಯಾಗುತ್ತಿದೆ.ಇತ್ತೀಚೆಗಷ್ಟೇ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಮಸೀದಿ ಒಡೆಯುತ್ತಾರೆ ಅನ್ನೋ ಅನುಮಾನವನ್ನ ಮುಸ್ಲಿಂ ಸಮುದಾಯದ ಮುಖಂಡರು ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಋಷಿ ಕುಮಾರ ಸ್ವಾಮಿಯ ಈ ಹೇಳಿಕೆ ಉರಿಯೋ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ.
ಡಿಸೆಂಬರ್ 16ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಸಂಕೀರ್ತನಾ ಯಾತ್ರೆ ಕೂಡ ನಡೆಯಿತು.ಇಷ್ಟು ವರ್ಷ ಮಂಡ್ಯ ಜಿಲ್ಲೆಗಷ್ಟೇ ಸೀಮಿತವಾಗಿದ್ದ ಯಾತ್ರೆ ಈ ಬಾರಿ ಮೈಸೂರು ವಿಭಾಗೀಯ ಮಟ್ಟಕ್ಕೆ ವಿಸ್ತರಣೆಯಾಗಿತ್ತು.ಮೆರವಣಿಗೆ ಹಾಗೂ ಧಾರ್ಮಿಕ ಸಭೆಯಲ್ಲೂ ಕೂಡ ಮಸೀದಿ ಒಡೆಯುವ ವಿಚಾರ ಮೊಳಗಿತ್ತು.ಅಲ್ಲಿಂದ ತಣ್ಣಗಾಗಿದ್ದ ಮಸೀದಿ ವಿಚಾರವನ್ನು ಕಾಳಿ ಸ್ವಾಮಿ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಮೊನ್ನೆಯಷ್ಟೇ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಅಸ್ತಿ ವಿಸರ್ಜನೆಗಾಗಿ ಶ್ರೀರಂಗಪಟ್ಟಣಕ್ಕೆ ಋಷಿ ಕುಮಾರಸ್ವಾಮಿ ಬಂದಿದ್ರು.ಈ ವೇಳೆ ವಿವಾದಿತ ಮಸೀದಿ ಮುಂದೆ ನಿಂತಿದ್ದ ಕಾಳಿಸ್ವಾಮಿ,ಹಿಂದೂ ದೇವಾಲಯವಾಗಿದ್ದ ಈ ಮಸೀದಿಯನ್ನ ಬಾಬರಿ ಮಸೀದಿ ರೀತಿ ಒಡೆಯಬೇಕು.ಇದಕ್ಕಾಗಿ ಎಲ್ಲಾ ಹಿಂದೂಗಳು ಸಂಘಟಿತರಾಗಬೇಕು ಎಂದು ಕರೆ ನೀಡಿದ್ರು.ಈ ವಿಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಋಷಿಕುಮಾರ ಸ್ವಾಮಿಯ ಈ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಭಾರತೀಯ ಪುರಾತತ್ವ ಇಲಾಖೆ ಶ್ರೀರಂಗಪಟ್ಟಣ ಟೌನ್ ಪೊಲೀಸರಿಗೆ ಸೋಮವಾರ ದೂರು ನೀಡಿದ್ರು.ತಕ್ಷಣ ಎಚ್ಚೆತ್ತ ಶ್ರೀರಂಗಪಟ್ಟಣ ಸಿಪಿಐ ಪುನೀತ್ ನೇತೃತ್ವದ ತಂಡ ರಾತ್ರೋರಾತ್ರಿ ಚಿಕ್ಕಮಗಳೂರಿನ ಕಾಳಿ ಮಠಕ್ಕೆ ತೆರಳಿ ಮಂಗಳವಾರ ಮುಂಜಾನೆಯೇ ಋಷಿ ಕುಮಾರಸ್ವಾಮಿ ಅವ್ರನ್ನ ವಶಕ್ಕೆ ಪಡೆದರು. ಬಳಿಕ ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡೆಸಿದರು.
ಇನ್ನು ನ್ಯಾಯಾಲಯಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಋಷಿ ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು. ಆದ್ರೆ, ಕಾಳಿಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದ ಬಾಲರಾಜು, ಮಸೀದಿಯನ್ನ ಏಕಾಏಕಿ ಒಡೆಯಬೇಕು ಅಂತಾ ಹೇಳಿಲ್ಲ.ಕಾನೂನು ಹೋರಾಟದ ಮೂಲಕ ಅಯೋಧ್ಯೆಯಂತೆ ದೇಗುಲ ಕಟ್ಟಬೇಕು ಅಂದಿದ್ದಾರೆ. ಹಾಗಾಗಿ ಅದು ಕೋಮು ಪ್ರಚೋದನೆ ನೀಡುವಂತಹದ್ದಲ್ಲ ಎಂದ್ರು.
ಒಟ್ಟಿನಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ಶ್ರೀರಂಗಪಟ್ಟಣ ಮಸೀದಿ ವಿಚಾರದ ಬಗ್ಗೆ ಕಾಳಿಸ್ವಾಮಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.